ಕಟೀಲು ಪರಿಸರದಲ್ಲಿ ಅಕ್ರಮ ಚಟುವಟಿಕೆ ನಿಲ್ಲಿಸಲು ಒತ್ತಾಯ

ಕಟೀಲು ಪಂಚಾಯತಿ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು

ಕಟೀಲು ಗ್ರಾಮಸಭೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಟೀಲು ಗ್ರಾಮ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಪಂಚಾಯತ್ ವಠಾರದಲ್ಲಿ ನಡೆಯಿತು. ಯಾವುದೇ ಪ್ರಯೋಜನಕ್ಕೆ ಬಾರದ ಕಟೀಲು ಸಿತ್ಲ ಪರಕಟ್ಟ ಕಿಂಡಿ ಅಣೆಕಟ್ಟು, ಕಟೀಲು ಪರಿಸರದಲ್ಲಿನ ಅಸ್ವಚ್ಛತೆ, ಪರವಾನಿಗೆ ಇಲ್ಲದೆ ಕಾರ್ಯಾಚರಿಸುವ ಅಂಗಡಿ ಮುಂಗಟ್ಟುಗಳು, ಕಟೀಲು ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಮತ್ತಿತರ ವಿಷಯಗಳ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಗ್ರಾಮಸಭೆ ನೀರಸವಾಗಿದ್ದು ಕೆಲವೇ ಮಂದಿ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು.

ಕಟೀಲು ದೇವಳದ ಪರಿಸರದಲ್ಲಿ ಹಲವು ಅಂಗಡಿಗಳಿಗೆ ಪರವಾನಿಗೆ ಇಲ್ಲ, ತಾತ್ಕಾಲಿಕ ಅಂಗಡಿಗಳು ತಲೆಎತ್ತಿವೆ. ಗಿಡಿಗೆರೆಯಿಂದ ಕಟೀಲು ಸೇತುವೆವರೆಗೆ ವ್ಯಾಪ್ತಿ ಮೀರಿದ ಅಕ್ರಮ ಕಟ್ಟಡಗಳು, ಅಸಮರ್ಪಕ ಟ್ರಾಫಿಕ್, ಪಾರ್ಕಿಂಗ್ ವ್ಯವಸ್ಥೆ, ಕಟೀಲು ಬಸ್ ನಿಲ್ದಾಣದಲ್ಲಿನ ಹೋಟೆಲ್ ತಾಜ್ಯ ನೀರು ನದಿಗೆ ಬಿಡಲಾಗುತ್ತದೆ. ಪಕ್ಕದ ಕುಡಿಯುವ ನೀರಿನ ಬಾವಿ ನಂದಿನಿ ನದಿ ಸೇರಿ ಮಲಿನವಾಗುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು, ಈ ಬಗ್ಗೆ ಅನೇಕ ಬಾರಿ ಪಂಚಾಯತಿ ಸಭೆಯಲ್ಲಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯಿತಿ ಪಿಡಿಒ ಪ್ರಕಾಶ್ ಬಿ ಮಾತಾನಾಡಿ, “ಪಂಚಾಯಿತಿ ನಿರ್ಣಯ ಮಾಡಿ ಸಂಬಂಧಿಸಿದವರಿಗೆ ಮನವರಿಕೆ ಮಾಡಿ ಕ್ರಮ ಜರಗಿಸಲಾಗುವುದು” ಎಂದರು.

ಹೊರಠಾಣೆಗೆ ಆಗ್ರಹ

ಕಟೀಲು ಗ್ರಾಮ ಪಂಚಾಯತಿ ವ್ಯಾಪ್ತಿಯ ನಡುಗೋಡು ಶಾಲೆಯ ಪರಿಸರ ಹಾಗೂ ಕಟೀಲು ಭ್ರಾಮರೀ ವನದ ಬಳಿ ಅಕ್ರಮ ಕೂಟಗಳು ಕಾರ್ಯಾಚರಿಸುತ್ತದೆ. ಕೆಲ ಅನಾಮಧೇಯ ವ್ಯಕ್ತಿಗಳು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಕಟೀಲಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಹೊರ ಠಾಣೆ ಆಗಬೇಕು, ಅಲ್ಲದೆ ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗಬೇಕು ಎಂದು ಒತ್ತಾಯಿಸಿದರು.

ಕಟೀಲು ಸಿತ್ಲ ಪರಕಟ್ಟದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ 4 ವರ್ಷದ ಹಿಂದೆ ನಿರ್ಮಾಣವಾದ ಕಿಂಡಿ ಅಣೆಕಟ್ಟು ಕೃಷಿಕರರಿಗೆ ಪ್ರಯೋಜನ ಬಾರದಂತಿದೆ. ಕಿಂಡಿಗೆ ಹಲಗೆ ಹಾಕಲು ಆಗುತ್ತಿಲ್ಲ, ನೀರು ವೃಥಾ ಪೋಲಾಗುತ್ತಿದೆ. ಬದಿಯಲ್ಲಿ ತಡೆಗೋಡೆಗಳಿರದೆ ಮಳೆಗಾಲದಲ್ಲಿ ನೀರು ಕೃಷಿ ಪ್ರದೇಶಗಳಿಗೆ ನುಗ್ಗುತ್ತಿದೆ. ಮಾಧ್ಯಮದವರು ಈ ಬಗ್ಗೆ ವರದಿ ಪ್ರಕಟಿಸಿದರೂ ಯಾವುದೇ ಪರಿಹಾರ ಕಂಡಿಲ್ಲ ಶಾಸಕ, ಸಂಸದರು ಭೇಟಿ ನೀಡಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಕಡೆಯಿಂದ ಯಾವುದೇ ಉತ್ತರವಿಲ್ಲ. ಗ್ರಾಮ ಸಭೆಗೆ ನೀರಾವರಿ ಇಲಾಖಾಧಿಕಾರಿಗಳು ಆಹ್ವಾನ ನೀಡಿದರೂ ಬರಲಿಲ್ಲ ಯಾಕೆ, ಕೃಷಿಕರ ಬಗ್ಗೆ ದಿವ್ಯ ನಿರ್ಲಕ್ಷ್ಯ ಯಾಕೆ ಎಂದು ಗ್ರ್ರಾಮಸ್ಥ ಸಿತ್ಲ ಜಗನ್ನಾಥ ಶೆಟ್ಟಿ ಪ್ರಶ್ನಿಸಿದರು.

ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಮಾತನಾಡಿ, “ಈ ಬಗ್ಗೆ ನಿರ್ಣಯ ಮಾಡಲಾಗಿದೆ. ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಕರೆಸಿ ಸಮಸ್ಯೆಯ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುವುದು” ಎಂದರು.