ಕುಂಬಳೆ ಪೇಟೆಯಲ್ಲಿ ಶೌಚಾಲಯಕ್ಕೆ ಆಗ್ರಹ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಕುಂಬಳೆ ಪೇಟೆಯಲ್ಲಿ ಹಳೆ ಬಸ್ ನಿಲ್ದಾಣ ಕಾಂಪ್ಲೆಕ್ಸ್ ತೆಗೆಯುವ ಪ್ರಕ್ರಿಯೆ ನಡೆಯುತ್ತಿದ್ದು, ನೂತನ ನಿಲ್ದಾಣ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕುಂಬಳೆ ಗ್ರಾ ಪಂ ನಿರ್ಧರಿಸಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗುವ ಪ್ರದೇಶದಲ್ಲೇ ನಿರ್ಮಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಸಮನ್ವಯ ಸಮಿತಿ ಬಂಬ್ರಾಣ ಇದರ ಪದಾಧಿಕಾರಿ ಜಯರಾಮ ಪೂಜಾರಿ ನೇತೃತ್ವದಲ್ಲಿ ನಾಗರಿಕರು ಪಂಚಾಯತಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಈ ಬಗ್ಗೆ ಆಗ್ರಹಿಸಿದ್ದಾರೆ. ಕುಂಬಳೆಯಲ್ಲಿ ಸಾರ್ವಜನಿಕ  ಶೌಚಾಲಯ ಸ್ಥಾಪಿಸಲು ಇನ್ನು ವಿಳಂಬವಾದರೆ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

ಕುಂಬಳೆಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಸಂಬಂಧಪಟ್ಟವರಿಗೆ ಆದೇಶಿಸಬೇಕೆಂದು  ವಿನಂತಿಸಿ ಕಳೆದ ಜೂನ್ ತಿಂಗಳಿನಲ್ಲಿ ಪ್ರಧಾನ ಮಂತ್ರಿಗೆ ಜಯರಾಮ ಪೂಜಾರಿ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸ್ವಚ್ಛ ಭಾರತ್ ಯೋಜನೆಯಲ್ಲಿ ಅಳವಡಿಸಿ ಕುಂಬಳೆಯಲ್ಲಿ ಶೌಚಾಲಯ ನಿರ್ಮಿಸಲು ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು. ಇದರಂತೆ ಕೇರಳ ಸರಕಾರದಿಂದ ಕುಂಬಳೆ ಪಂಚಾಯತು ಕಾರ್ಯದರ್ಶಿಗೆ ಪತ್ರ ಬರೆದು ಶೌಚಾಲಯ  ನಿರ್ಮಿಸುವಂತೆ ತಿಳಿಸಲಾಗಿತ್ತು.