`ಎಂಆರ್ಪಿಎಲ್ ಪುನರುತ್ಥಾನವಾಗಲಿ, ಭೂಸ್ವಾಧೀನ ಬೇಡ’

ಮಂಗಳೂರು : ಸುಮಾರು 25 ವರ್ಷ ಹಳೆಯದಾದ ಮಂಗಳೂರು ತೈಲಗಾರ (ಎಂಆರ್ಪಿಎಲ್) ಶೀಥಿಲವಾಗುತ್ತಿದ್ದು, ವಿಸ್ತರಣೆಯ ಬದಲು ಹಳೆಯ ಸ್ಥಾವರವನ್ನು ಪುನರುತ್ಥಾನಗೊಳಿಸುವುದು ಸೂಕ್ತ ಎಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಸಲಹೆ ಮಾಡಿದೆ.

ಸೋಮವಾರ ಮಂಗಳೂರಿನಲ್ಲಿ ಮಂಗಳೂರು ತೈಲಗಾರ ವಿಸ್ತರಣೆ ಕುರಿತಾಗಿ ಕರ್ನಾಟಕ ಪರಿಸರ ಮಾಲಿನ್ಯ ಮಂಡಳಿ ವತಿಯಿಂದ ಸಾರ್ವಜನಿಕ ಅಹವಾಲು ಸಭೆ ಆಯೋಜಿಸಲಾಗಿತ್ತು. ತೈಲಗಾರದ ಮೊದಲ ಹಂತದ ಉಕ್ಕಿನ ಉಪಕರಣಗಳು ತುಕ್ಕು ಹಿಡಿದಿರುವುದರಿಂದ ಹೊಸದಾಗಿ ಭೂಮಿ ಸ್ವಾಧೀನ ಮಾಡುವ ಬದಲಾಗಿ ಈಗಿರುವ ಹಳೆಯ ಸ್ಥಾವರ ಪ್ರದೇಶದಲ್ಲಿ ಇಂಧನ ಗುಣಮಟ್ಟದ ತೈಲಗಾರ ಸ್ಥಾಪಿಸುವುದು ಸೂಕ್ತ ಎಂದು ವೇದಿಕೆಯ ವಿದ್ಯಾ ದಿನಕರ್ ಮತ್ತು ಕ್ಯಾಪ್ಟನ್ ಎಚ್ ವಾಜ್ ಅವರು ಮಂಡಳಿಗೆ ಹೇಳಿದರು.

ಪ್ರಸ್ತಾವಿತ ಎಂಆರ್ಪಿಎಲ್ ಹಂತ 4ರಲ್ಲಿ ತೈಲಾಗಾರ ಸಂಕೀರ್ಣದ ಹಳೆಯ ಭಾಗಗಳನ್ನು ನವೀಕರಣ ಮಾಡಬೇಕು. ಪ್ರಸ್ತಾವಿತ ಹಂತ 4 ತೈಲಾಗಾರ ವಿಸ್ತಾರಕ್ಕೆ ಪ್ರಸ್ತುತ ಆವರಣದಲ್ಲಿ ಸ್ಥಳಾವಕಾಶವಿದೆ. ಆದುದರಿಂದ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ವೇದಿಕೆ ಹೇಳಿದೆ.

ಇಂದು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತಿದೆ. ಹೊಸ ವಿಸ್ತರಣೆಗಾಗಿ ನೇತ್ರಾವತಿ ನದಿಯಿಂದ ಹೆಚ್ಚುವರಿ ನೀರನ್ನು ಬಯಸುವಂತಿಲ್ಲ. ನೀರಿನ ಲಭ್ಯತೆ ಒಂದು ವೈಜ್ಞಾನಿಕ ಅಧ್ಯಯನ ಆಧರಿಸಿ ಈಗಾಗಲೇ ಮಾಲಿನ್ಯ ಮಂಡಳಿ ಹೆಚ್ಚುವರಿ ನೀರಿನ ಉಪಯೋಗಕ್ಕೆ ಅವಕಾಶ ನೀಡಿಲ್ಲ. ಆದುದರಿಂದ ವಿಸ್ತರಣೆಗೆ ಹೆಚ್ಚುವರಿ ನೀರು ಕೇಳುವಂತಿಲ್ಲ. ಈಗಿರುವ ಹಳೆಯ ಸ್ಥಾವರವನ್ನು ಪುನರುಜ್ಜೀವನಗೊಳಿಸಿದರೆ ಹೊಸದಾಗಿ ಹೆಚ್ಚುವರಿ ನೀರಿನ ಅಗತ್ಯ ಇರುವುದಿಲ್ಲ. ಆದುದರಿಂದ ಹಳೇ ಸ್ಥಾವರದ ಪ್ರದೇಶದಲ್ಲೇ ಹೊಸ ತಂತ್ರಜ್ಞಾನ ಅಳವಡಿಸಿ ವಿಸ್ತರಣೆ ಮಾಡಿ ಎಂಬುದು ವೇದಿಕೆಯ ಬೇಡಿಕೆಯಾಗಿದೆ.

ಕರಾವಳಿ ಪ್ರದೇಶದಲ್ಲಿ ಕೈಗಾರಿಕಾ ಉಪಯೋಗ ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಬೇಸಿಗೆ ಕಾಲದಲ್ಲಿ ಈ ಸಂಘರ್ಷ ಉಂಟಾಗುತ್ತದೆ. ನದಿ ನೀರಿನ ಅವಶ್ಯಕತೆಗಳನ್ನು ಎಲ್ಲಾ ಬಳಕೆದಾರರಿಗೆ ಆದ್ಯತೆ ಪ್ರಕಾರ ಕುಡಿಯವ ನೀರಿಗೆ ಮನ್ನಣೆ ನೀಡಬೇಕಾಗುತ್ತದೆ. ಆಗ ಕೈಗಾರಿಕಾ ಉಪಯೋಗಕ್ಕೆ ನೀರು ದೊರೆಯವುದಿಲ್ಲ ಎಂಬುದನ್ನು ತೈಲಾಗಾರ ಅರಿತುಕೊಳ್ಳಬೇಕು ಎಂದು ವೇದಿಕೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಆಗಿಂದಾಗ್ಗೆ ಅಪಘಾತಗಳು ನಡೆಯುವುದು ಕಂಡುಬಂದಿದೆ, ವಾಸ್ತವವಾಗಿ ತೈಲಾಗಾರ ಮೊದಲ ಹಂತವು ಸ್ಪಷ್ಟವಾಗಿ ತನ್ನ ಆಯಸ್ಸಿನ ಅಂತಿಮ ಹಂತದಲ್ಲಿದೆ. ಎರಡನೇ ಹಂತದ ಘಟಕಗಳಿಗೂ ವೇಗವಾಗಿ ವಯಸ್ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಒಟ್ಟಾರೆ ಸ್ಥಾವರದ ಬಗ್ಗೆ ಸ್ವತಂತ್ರ ಮೂರನೇ ವ್ಯಕ್ತಿಯ ತಪಾಸಣೆ ಸುರಕ್ಷತೆ ಹಿನ್ನೆಲೆಯಲ್ಲಿ ಅಗತ್ಯವಾಗಿದೆ ಎಂದು ವೇದಿಕೆ ಹೇಳಿದೆ.