ಮಲ್ಟಿಪ್ಲೆಕ್ಸ್ ಪ್ರಖರದ ಮಧ್ಯೆ ಕಳೆ ಕಳೆದುಕೊಂಡ ಪ್ಲಾಟಿನಂ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಸರ್ಕಾರ ಜನತಾ ಚಿತ್ರಮಂದಿರ ಕಲ್ಪನೆಯನ್ನು ಜನಪ್ರಿಯಗೊಳಿಸಲು ಎಲ್ಲಾ ಸಿದ್ಧತೆ ನಡೆಸುತ್ತಿರುವಂತೆಯೇ ನಗರದ ಚಿತ್ರಮಂದಿರವೊಂದು ಚಿತ್ರಪ್ರದರ್ಶನವನ್ನೇ ನಿಲ್ಲಿಸಿಬಿಟ್ಟಿದೆ.

ನಾಯಿಕೊಡೆಗಳಂತೆ ನಗರದಲ್ಲಿ ತಲೆ ಎತ್ತುತ್ತಿರುವ ಮಲ್ಟಿಪ್ಲೆಕ್ಸುಗಳಿಂದಾಗಿ ಏಕತೆರೆಯ ಸಿನಿಮಾ ಟಾಕೀಸುಗಳು ವೀಕ್ಷಕರ ಕೊರತೆಯಿಂದ ನಲುಗುತ್ತಿದೆ. ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಫಳ್ನೀರ್ ರಸ್ತೆಯ ಪ್ಲಾಟಿನಂ ಚಿತ್ರಮಂದಿರ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಹೊಸ ವರ್ಷದ ಆರಂಭದಿಂದ ಈ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನ ನಡೆಯುತ್ತಿಲ್ಲ.

ಪ್ರಸಕ್ತ ಮಂಗಳೂರಿನಲ್ಲಿ ಮೂರು ಮಲ್ಟಿಪ್ಲೆಕ್ಸುಗಳು ತಲೆ ಎತ್ತಿವೆ. ಪಾಂಡೇಶ್ವರದ ಫೋರಂ ಮಾಲಿನ ಪಿವಿಆರ್ ಸಿನಿಮಾಸ್, ಕೆ ಎಸ್ ರಾವ್ ರೋಡಿನ ಸಿಟಿ ಸೆಂಟರಿನ ಸಿನಿಪಾಲಿಸ್ ಮತ್ತು ಭಾರತ್ ಮಾಲ್ ಬಿಗ್ ಸಿನಿಮಾಸ್ ಇದೀಗ ಚಿತ್ರ ವೀಕ್ಷಕರ ಕೇಂದ್ರ ಬಿಂದುಗಳಾಗಿವೆ.

ಮಲ್ಟಿಫ್ಲೆಕ್ಸುಗಳು ಹಿಂದಿ, ಇಂಗ್ಲಿಷ್ ಬಿಟ್ಟು ಇತರ ಭಾಷೆಗಳ ಚಿತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಇದೇ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಹೆಚ್ಚು ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದನ್ನು ಖಚಿತಪಡಿಸಲು ಜನತಾ ಚಿತ್ರ ಮಂದಿರ ಕಲ್ಪನೆಯನ್ನು ಜನಪ್ರಿಯಗೊಳಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಎಲ್ಲಾ ಕಾರಣಗಳಿಂದ  ಏಕಪ್ರದರ್ಶನ ಚಿತ್ರಮಂದಿರಗಳು ನಿಧಾನವಾಗಿ ಇತಿಹಾಸದ ಪುಟಗಳನ್ನು ಸೇರಲಾರಂಭಿಸಿವೆ.

ಪ್ಲಾಟಿನಂ ಚಿತ್ರಮಂದಿರವು ಸುಮಾರು 40 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಇದು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ಪ್ರದರ್ಶಿಸಿದೆ. ವಿಶಾಲ್ ನಟನೆಯ ತಮಿಳು ಚಿತ್ರ ಕತ್ತತ್ತಿ ಸ್ಯಾಂಡಯಿ ಕೊನೆಯದಾಗಿ ಪ್ರದರ್ಶನಗೊಂಡ ಚಿತ್ರವಾಗಿದ್ದು, ಇದು ಸಾಧಾರಣ ಸಂಗ್ರಹವನ್ನು ತಂದುಕೊಟ್ಟಿದೆ.

ತಾತ್ಕಾಲಿಕ ಬಂದ್

ಸಿನಿಮಾ ಪ್ರದರ್ಶನ ನಿಲ್ಲಿಸಿರುವುದು ಕೆಲವೇ ದಿನಗಳು ಮಾತ್ರ ಎಂದು ಕಾಂಟ್ರಾಕ್ಟ್ ಆಧಾರದಲ್ಲಿ ಥಿಯೇಟರನ್ನು ನಡೆಸುತ್ತಿರುವ ಚಿತ್ರ ಪ್ರದರ್ಶಕ ಅಶೋಕಕುಮಾರ್ ಹೇಳಿದ್ದಾರೆ. ಕಳೆದ 3 ವರ್ಷಗಳಿಂದ ನಾನು ನಷ್ಟದಲ್ಲಿ ಟಾಕೀಸ್ ನಡೆಸುತ್ತಿದ್ದೆ. ಹಾಗಾಗಿ ಚಿತ್ರಪ್ರದರ್ಶನ ಪರವಾನಗಿ ನವೀಕರಿಸುವುದಿಲ್ಲ ಎಂದು ನಿರ್ಧರಿಸಿದ್ದೆ. ನವೀಕರಣ ಕೊನೆಯ ಅವಧಿ ಜನವರಿ 1 ತಾರೀಕು ಎಂದು ಅಶೋಕ್ ವಿವರಿಸಿದ್ದಾರೆ.

ಪ್ಲಾಟಿನಂ ಚಿತ್ರಮಂದಿರ 330 ಬಾಲ್ಕನಿ ಸೀಟುಗಳು, 390 ಫಸ್ಟ್ ಕ್ಲಾಸ್ ಮತ್ತು 60 ಗಾಂಧಿ ಕ್ಲಾಸ್ ಸೀಟುಗಳು ಸೇರಿದಂತೆ ಒಟ್ಟು 720 ಸೀಟುಗಳನ್ನು ಹೊಂದಿದೆ. ಸುಮಾರು ಐದು ವರ್ಷಗಳ ಹಿಂದೆ ಪಾಂಡೇಶ್ವರದ ಅಮೃತ ಟಾಕೀಸ್ ಮುಚ್ಚಲ್ಪಟ್ಟಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.