ಮೂಲೆಗುಂಪಾದ ಪ್ಲಾಸ್ಟಿಕ್ ಆದೇಶ

ರಾಜ್ಯ ಸರಕಾರ ವಿವಿಧ ರೀತಿಯ, ಪ್ಲಾಸ್ಟಿಕ್ ಕವರ್, ಬ್ಯಾನರ್, ಬಂಟಿಂಗ್ಸ್ ಬಳಕೆ ನಿಷೇಧ ಆದೇಶದ ನಿಯಮಗಳೆಲ್ಲ ಕಾಗದದಲ್ಲೇ ಉಳಿಯುವಂತಾಗಿದೆ.
ಪ್ಲಾಸ್ಟಿಕ್ ಬಳಕೆಯಿಂದ ಮಣ್ಣು, ಆರೋಗ್ಯ ರಕ್ಷಣೆ ಗಮನದಲ್ಲಿರಿಸಿ ಸರಕಾರ ಈ ಬಗ್ಗೆ ಆದೇಶಿಸಿತು. ಇದರಂತೆ ಪ್ಲಾಸ್ಟಿಕ್ ಕವರು, ಲೋಟ, ಪ್ಲೇಟ್ ಉತ್ಪಾದನೆ, ಬಳಕೆ ತಡೆಹಿಡಿಯಲಾಗಿತ್ತು. ಅಲ್ಲದೆ ಪ್ಲಾಸ್ಟಿಕ್ ಕವರ್ ಸೇರಿದಂತೆ ವಿವಿಧ ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ಸ್ಥಳೀಯಾಡಳಿತ ದಾಳಿ ನಡೆಸಿ ಉತ್ಪನ್ನ ವಶಪಡಿಸಿಕೊಳ್ಳುತ್ತಿತ್ತು. ಇದೀಗ ಆದೇಶ ಪಾಲನೆ ಮೂಲೆಗುಂಪಾಗಿದ್ದು, ಎಗ್ಗಿಲ್ಲದೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಉತ್ಪಾದನೆ ನಡೆಯುತ್ತಿದೆ. ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ ಸೇರಿದಾಗ ಕೊಳೆಯದ ಕಾರಣ ಜೀವ ವೈವಿಧ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಕ್ಯಾರಿಬ್ಯಾಗ್ ಉತ್ಪಾದನೆ, ಬಳಕೆಗೆ ಉತ್ತೇಜನ ನೀಡಲಾಗುತ್ತಿತ್ತು. ಆದರೆ ಆದೇಶ ಕೆಲವೇ ದಿನಗಳ ಪಾಲನೆಯಾಗಿದ್ದು ಆಡಳಿತ ವರ್ಗ ನಿಯಮ ಪಾಲನೆಗೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಅಂತೆಯೇ ಜನರಲ್ಲಿಯೂ ಈ ಬಗ್ಗೆ ಜಾಗೃತಿ ಕೊರತೆಯಿದೆ. ಈ ಬಗ್ಗೆ ಸ್ಥಳೀಯಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ಲಾಸ್ಟಿಕ್ ಮಾರಿ ನಿರ್ಮೂಲನೆಗೆ ಮನಸ್ಸು ಮಾಡಬೇಕಿದೆ

  • ಅನಿಲ್ ಕಾಸರಗೋಡು