ಮಾ 1ರಿಂದ ಕಾಸರಗೋಡು ನಗರದಲ್ಲಿ ಪ್ಲಾಸ್ಟಿಕ್ ನಿಷೇಧ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಮಾರ್ಚ್ 1ರಿಂದ 50 ಮೈಕ್ರೋನಿಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಇತರ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಾಗಾಟ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ನಗರಸಭೆಯು ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ಲಾಸ್ಟಿಕ್ ಉತ್ಪನ್ನಗಳು 50 ಮೈಕ್ರೋನಿಗಿಂತ ಹೆಚ್ಚಿರುವುದಾಗಿ ಖಾತರಿಪಡಿಸುವ ಸಲುವಾಗಿ ಹೊಲೋಗ್ರಾಂ ಲಗತ್ತಿಸಲು ತೀರ್ಮಾನಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ವಿರುದ್ಧ ತಿಳುವಳಿಕೆ ಮೂಡಿಸಿ ವಿದ್ಯಾ ಸಂಸ್ಥೆಗಳಿಂದ ಪ್ಲಾಸ್ಟಿಕ್ ಮಾಲಿನ್ಯಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.
ನಗರಸಭೆ ವ್ಯಾಪ್ತಿಯಿಂದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಅದರ ಬೆಲೆ ತೀರ್ಮಾನಿಸಲು ವ್ಯಾಪಾರಿಗಳ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ವ್ಯಾಪಾರಿಗಳ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗುವುದು. ಪ್ಲಾಸ್ಟಿಕ್ ಬ್ಯಾಗುಗಳಿಗೆ ಮೈಕ್ರೋನ್ ಅನುಸಾರ ಬೆಲೆ ನಿಗದಿಪಡಿಸುವ ಯೋಜನೆ ರೂಪಿಸಲಾಗಿದೆ.
ವಿವಾಹ ಸಹಿತ ಇನ್ನಿತರ ಸಮಾರಂಭಗಳಲ್ಲಿ, ಸಭಾಂಗಣಗಳಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ವಿಜ್ಞಾಪನಾ ದಿನಾಂಕದ ಬಳಿಕ ಪ್ಲಾಸ್ಟಿಕ್ ಕಪ್ಪುಗಳನ್ನು ಬಳಸುವಂತಿಲ್ಲ. ಇಂತಹ ಸ್ಥಳಗಳಲ್ಲಿ ಅಲ್ಯೂಮಿನಿಯಂ, ಸ್ಟೀಲ್, ಗಾಜಿನ ಪಾತ್ರೆಗಳು ಅಥವಾ ಕಪ್ಪುಗಳನ್ನು ಮಾತ್ರವೇ ಉಪಯೋಗಿಸಬಹುದು. ಹೋಟೆಲುಗಳು, ಬೇಕರಿಗಳಲ್ಲಿ ಸಹಿತ ಇನ್ನಿತರ ವ್ಯಾಪಾರ ಸಂಸ್ಥೆಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬ್ಯಾಗುಗಳನ್ನು ಉಚಿತವಾಗಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾಯ್ದೆ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ಒಂದು ಕಿಲೋ ಗ್ರಾಂ ವರೆಗಿನ ಪ್ಲಾಸ್ಟಿಕ್ ಉತ್ಪನ್ನಗಳಿಗೆ 500 ರೂ ದರದಲ್ಲಿ ದಂಡ ವಸೂಲಾತಿ ಮಾಡಲಾಗುವುದು. ಒಂದೇ ಸಂಸ್ಥೆ ಮೂರಕ್ಕಿಂತ ಹೆಚ್ಚು ಬಾರಿ ಕಾಯ್ದೆ ಉಲ್ಲಂಘಿಸಿದಲ್ಲಿ ಲೈಸನ್ಸ್ ರÀದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಒಂದು ವೇಳೆ ನಿಗದಿತ ಮೈಕ್ರೋನಿಗಿಂತ ಕೆಳಗಿನ ಪ್ಲಾಸ್ಟಿಕ್ ಬ್ಯಾಗುಗಳನ್ನು ಮತ್ತೆ ಮತ್ತೆ ಮಾರಾಟ ಅಥವಾ ಉಚಿತವಾಗಿ ನೀಡಿದಲ್ಲಿ ಕಠಿಣ ಶಿಕ್ಷೆ ವಿಧಿಸುವ ನಿಮಿತ್ತ ಯೋಜನೆ ರೂಪಿಸಲಾಗುತ್ತಿದೆ ಎಂದು ನಗರಸಭೆ ತಿಳಿಸಿದೆ.