ಮನಪಾ ವಲಯ ಕಚೇರಿಗಳ ಪುನರ್ ಸಂಘಟನೆಗೆ ಚಿಂತನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ನಗರ ಪಾಲಿಕೆಯ (ಮನಪಾ) ವಲಯ ಕಚೇರಿಗಳನ್ನು ಪುನರ್ ಸಂಘಟಿಸಲು ಚಿಂತಿಸಲಾಗಿದೆ.

ಲಾಲಬಾಗಿನಲ್ಲಿರುವ ಮನಪಾ ಪ್ರಧಾನ ಕಚೇರಿ ಮತ್ತು ಬಿಕರ್ಣಕಟ್ಟೆ ಹಾಗೂ ಸುರತ್ಕಲ್ಲಿನಲ್ಲಿರುವ ಉಪ-ಕಚೇರಿಯ ವ್ಯಾಪ್ತಿಯಲ್ಲಿರುವ ವಾರ್ಡುಗಳ ಸಮರ್ಪಕ ಹಂಚಿಕೆಗೆ ಯೋಚಿಸಲಾಗಿದೆ. ಸುರತ್ಕಲ್ ಮತ್ತು ಲಾಲಬಾಗ್ ಕಚೇರಿ ಹಂಚಿಕೆ ವಿಷಯದಲ್ಲಿ ಯಾವುದೇ ದೂರುಗಳು ಬರದಿದ್ದರೂ, 14 ವಾರ್ಡುಗಳು ಹೊಂದಿರುವ ಬಿಕರ್ಣಕಟ್ಟೆ ಕಚೇರಿಯು ಬಹಳಷ್ಟು ದೂರದಲ್ಲಿದೆ.

ಕಣ್ಣೂರು, ಅಳಪೆ, ಜಪ್ಪಿನಮೊಗರು, ದೇರೆಬೈಲು ಮತ್ತು ಇತರ ವಾರ್ಡುಗಳ ಜನರು ಬಿಕರ್ಣಕಟ್ಟೆ ಕಚೇರಿಗೆ ಬರಬೇಕಿದ್ದರೆ ಎರಡು ಬಸ್ ಹಿಡಿಯಬೇಕಾಗುತ್ತದೆ.

ಬಿಲ್ಲುಗಳ ಪಾವತಿ, ಅರ್ಜಿಗಳ ಸಲ್ಲಿಕೆ, ಸ್ವಯಂಘೋಷಿತ ತೆರಿಗೆ ಪಾವತಿ ಮತ್ತು ಇತರ ಸೇವೆಗಳಿಗಾಗಿ ವಲಯ ಕಚೇರಿಗಳನ್ನು ಸ್ಥಾಪಿಸಲಾಗಿದೆ.

ಬಜಾಲಿನಿಂದ ಬಿಕರ್ಣಕಟ್ಟೆಗೆ ನೇರ ಬಸ್ ರೂಟಿಲ್ಲ. ಕಚೇರಿಯಲ್ಲಿ ಸರತಿ ಸಾಲಿದ್ದರೆ ತಮ್ಮ ಕೆಲಸಕ್ಕಾಗಿ ಅರ್ಧ ದಿನ ಕಾಯಬೇಕಾಗುತ್ತದೆ. ಬಜಾಲ್, ಜೆಪ್ಪಿನಮೊಗರು ಮತ್ತು ಸುತ್ತಲ ವಾರ್ಡುಗಳನ್ನು ಲಾಲಬಾಗ್ ಕಚೇರಿಯೊಂದಿಗೆ ಸಂಪರ್ಕ ಕಲ್ಪಿಸಿದರೆ ಎಷ್ಟೋ ಉತ್ತಮ ಎಂದು ಬಜಾಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

ವಲಯ ಕಚೇರಿಗಳಿಗೆ ಹಂಚಿಕೆ ಮಾಡಲಾಗಿರುವ ವಾರ್ಡುಗಳ ಕ್ರಮ ಸಮರ್ಪಕವಾಗಿಲ್ಲ. ಇದನ್ನು ಮೇಯರ್ ಮುತುವರ್ಜಿವಹಿಸಿ ಸರಿಪಡಿಸಬೇಕು ಎಂದು ಅಳಪೆ-1ರ ಕಾರ್ಪೊರೇಟರ್ ವಿಜಯಕುಮಾರ್ ಸಲಹೆ ನೀಡಿದರು.

ವಲಯ ಕಚೇರಿಗಳ ಹಂಚಿಕೆ ಮಾಡಲಾಗಿದ್ದರೂ, ಅವುಗಳಿಂದ ಜನರಿಗೆ ತೊಂದರೆಯಾಗುತ್ತಿದೆಯಾದರೆ, ಅಂತಹ ವ್ಯವಸ್ಥೆ ಸರಿಯಾಗಿಲ್ಲ ಎಂದರ್ಥ. ಬಿಕರ್ಣಕಟ್ಟೆಯ ಬದಲಿಗೆ ಮಲ್ಲಿಕಟ್ಟೆಯಲ್ಲಿ ವಲಯ ಕಚೇರಿ ಸ್ಥಾಪಿಸಿದರೆ ಎಷ್ಟೋ ಉತ್ತಮ ಎಂದು ಬಿಜೆಪಿ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.

“ವಲಯ ಕಚೇರಿಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೆಲವು ಕಾರ್ಪೊರೇಟರುಗಳು ಮತ್ತು ಸಾರ್ವಜನಿಕರು ದೂರು ನೀಡಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಕಾರ್ಪೊರೇಟರುಗಳ ಸಭೆ ನಡೆಸಿ, ಜನರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ವಲಯ ಕಚೇರಿ ಸ್ಥಾಪಿಸಲಾಗುವುದು” ಎಂದು ಮೇಯರ್ ಹರಿನಾಥ್ ಹೇಳಿದರು.