ಕಾರವಾರ ಕಡಲತೀರದಲ್ಲಿ ರಾಕ್ ಗಾರ್ಡನ್ ನಿರ್ಮಿಸಲು ನಿರ್ಧಾರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಲೆಂದು ಕೋಸ್ಟಗಾರ್ಡಿಗೆ ನೀಡಿದ ಭೂಮಿಯನ್ನು ವಾಪಸ್ ಪಡೆದು ಆ ಜಾಗದಲ್ಲಿ ರಾಕ್ ಗಾರ್ಡನ್ ನಿರ್ಮಿಸಲು ನಿರ್ಧರಿಸಲಾಗಿದೆ” ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದರು.

ಇಲ್ಲಿನ ಕಡಲತೀರದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರಕ್ಕೆ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಚಾಲನೆ ನೀಡಿ ಮಾತನಾಡುತ್ತಿದ್ದರು. “ಕಡಲತೀರದಲ್ಲಿ ರಾಕ್ ಗಾರ್ಡನ್ ರೂಪಿಸಲಾಗುತ್ತಿದೆ. ಈ ಸಂಬಂಧ ಶಿಲ್ಪಕಲಾ ಶಿಬಿರವನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ಆಯೋಜಿಸಿದ್ದೇವೆ. ರಾಕ್ ಗಾರ್ಡನಿಗೆ ಪೂರಕವಾಗಿ ಜಿಲ್ಲೆಯ ಬುಡಕಟ್ಟು ಜನಾಂಗಗಳಾದ ಹಾಲಕ್ಕಿ, ಕುಣಬಿ, ಕುಂಬ್ರಿ ಮರಾಠಿ, ಗೌಳಿ, ಗೊಂಡ, ಸಿದ್ದಿ ಸಮುದಾಯಗಳ ಸಂಭ್ರಮದ ಮತ್ತು ಸಾಂಸ್ಕøತಿಕ ನೃತ್ಯಕಲೆಗಳ ಶಿಲ್ಪಗಳನ್ನು ನಿರ್ಮಾಣ ಮಾಡಲು ಕಲಾವಿದರು ಪ್ರತಿಭೆಯನ್ನು ಮೆರೆಯಬೇಕು. ಕಾರವಾರ ರಾಕ್ ಗಾರ್ಡನನ್ನು ದೇಶ ಮಟ್ಟದ ಎಲ್ಲಾ ಬುಡಕಟ್ಟು ಸಮುದಾಯಗಳ ಕಲೆಗಳನ್ನು ಮತ್ತು ಜನಜೀವನವನ್ನು ಪ್ರತಿಬಿಂಬಿಸುವಂತೆ ರೂಪಿಸುವ ಕನಸಿದೆ. ಹಾಗಾಗಿ ಶಿಲ್ಪಕಲಾ ಅಕಾಡೆಮಿಯಲ್ಲಿ ಲಭ್ಯವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಬಳಸಿ ವಿಶೇಷವಾಗಿ ಆಯ್ದ ಕಲಾವಿದರನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಕರೆಸಲಾಗಿದೆ” ಎಂದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಮಾತನಾಡಿ, “ವಿನಯವೇ ಕಲಾವಿದರ ಮೊದಲ ಲಕ್ಷಣ. ಸರಸ್ವತಿ ಪುತ್ರರಾದ ಶಿಲ್ಪ ಕಲಾವಿದರಿಗೆ ಬದುಕಿನಲ್ಲಿ ಸಾಕಷ್ಟು ಅವಕಾಶಗಳಿವೆ. ಅವರು ಅವಕಾಶಕ್ಕಾಗಿ ಕಾಯಬೇಕು” ಎಂದರು.