ಮಜೀರ್ಪಳ್ಳ-ಕೋಳ್ಯೂರು ರಸ್ತೆ ದುರಸ್ತಿಗಾಗಿ ಪ್ರಧಾನಿಗೆ ದೂರು

ಸಾಂದರ್ಭಿಕ ಚಿತ್ರ

ಪೀಎಂ ಕಚೇರಿಯಿಂದ ಜಿಲ್ಲಾಧಿಕಾರಿಗೆ ಆದೇಶ

ಮಂಜೇಶ್ವರ : ರಸ್ತೆಯ ಶೋಚನೀಯ ಸ್ಥಿತಿಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ದೈಗೋಳಿ ಬಳಿಯ ಬಲಿಪಗುಳಿ ನಿವಾಸಿಯೊಬ್ಬರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಕಾಸರಗೋಡು ಜಿಲ್ಲಾಧಿಕಾರಿಗೆ ಪ್ರಧಾನಮಂತ್ರಿ ಕಚೇರಿಯಿಂದ ನಿರ್ದೇಶನ ಬಂದಿದೆ. ಮೀಂಜ ಗ್ರಾಮ ಪಂಚಾಯತು ವ್ಯಾಪ್ತಿಯ ಮಜೀರ್ಪಳ್ಳ ಜಂಕ್ಷನ್ನಿನಿಂದ ಕೋಳ್ಯೂರುವರೆಗಿನ ಲೋಕೋಪಯೋಗಿ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದ್ದು, ಈ ಕುರಿತು ಬಲಿಪಗುಳಿ ನಿವಾಸಿ, ಕೂಲಿ ಕಾರ್ಮಿಕ ಜಯಪ್ರಕಾಶ್ (27) ಅವರು ಒಂದೂವರೆ ತಿಂಗಳ ಹಿಂದೆ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತ್ಯುತ್ತರವಾಗಿ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಜಯಪ್ರಕಾಶರಿಗೆ ಪ್ರಧಾನಮಂತ್ರಿಯ ನಿರ್ದೇಶನ ಲಭಿಸಿದ ಬಗ್ಗೆ ತಿಳಿಸಲಾಗಿದೆ. ಮಜೀರ್ಪಳ್ಳ ಜಂಕ್ಷನ್ನಿನಿಂದ ಕೋಳ್ಯೂರಿಗೆ 3 ಕಿಲೋ ಮೀಟರ್ ದೂರವಿದ್ದು, ಈ ರಸ್ತೆಯ ಎರಡೂ ಕಡೆ ನೀರು ಕಟ್ಟಿ ನಿಲ್ಲುವಲ್ಲಿ ಕಾಂಕ್ರಿಟೀಕರಣ ನಡೆಸಲಾಗಿದೆ. ಆದರೆ ಉಳಿದ ಕಡೆಗಳಲ್ಲಿ ಸಂಚಾರವೇ ದುಸ್ತರವಾಗಿದೆ. ಕೋಳ್ಯೂರು ಶಂಕರನಾರಾಯಣ ದೇವಸ್ಥಾನ, ಕೋಳ್ಯೂರು ಶಾಲೆಗೆ ತೆರಳುವವರ ಸಹಿತ ನೂರಾರು ಮಂದಿ ದಿನಂಪ್ರತಿ ಸಂಚರಿಸುವ ಈ ರಸ್ತೆಯ ದುಃಸ್ಥಿತಿ ಪರಿಹರಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗದಿರುವುದರಿಂದ ಜಯಪ್ರಕಾಶ್ ಅವರು ಪ್ರಧಾನಿಗೆ ದೂರು ಕೊಟ್ಟಿದ್ದರು. ಇನ್ನಾದರೂ ಈ ರಸ್ತೆಯು ಸಂಚಾರಯೋಗ್ಯಗೊಳ್ಳಬಹುದೇ ಎಂಬ ನಿರೀಕ್ಷೆ ಜನರಲ್ಲಿದೆ.

LEAVE A REPLY