ಪಕ್ಷಿಕೆರೆ ನಕಲಿ ಕೆಪಿಸಿಸಿ ಸದಸ್ಯನ ವಿರುದ್ಧ ಹೈಕಮಾಂಡಿಗೆ ದೂರು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಹಳೆಯಂಗಡಿ ಸಮೀಪದ ಪಕ್ಷಿಕೆರೆ-ತೋಕೂರು ಮೂಲದ ಕಾಂಗ್ರೆಸ್ ಕಾರ್ಯಕರ್ತ ಗುರುರಾಜ್ ಎಸ್ ಪೂಜಾರಿ ನಕಲಿ ಕೆಪಿಸಿಸಿ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಆರೋಪಿಸಿದ್ದಾರೆ.

ಹಳೆಯಂಗಡಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. “ಈ ಬಗ್ಗೆ ಹಲವಾರು ದೂರುಗಳು ಬಂದಿದ್ದು, ಗುರುರಾಜ್ ಪೂಜಾರಿ ಕಳೆದ ಜಿಲ್ಲಾ ಹಾಗೂ ತಾಲೂಕು ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಶಕ್ತಿಮೀರಿ ಶ್ರಮಿಸಿದ್ದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಹೈಕಮಾಂಡಿಗೆ ದೂರು ನೀಡಲಾಗಿದೆ” ಎಂದು ತಿಳಿಸಿದರು.

“ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 2 ಕೆಪಿಸಿಸಿ ಸದಸ್ಯತ್ವವಿದ್ದು, ಮುಲ್ಕಿಯಲ್ಲಿ ಹಳೆಯಂಗಡಿ ವಸಂತ್ ಬೆರ್ನಾಡ್ ಹಾಗೂ ಮೂಡಬಿದ್ರೆಯಲ್ಲಿ ಸಂಪತ್ ಸಾಮ್ರಾಜ್ಯವರಿಗೆ ನೀಡಲಾಗಿದೆ. ಬೇರ್ಯಾರಿಗೂ ಕೆಪಿಸಿಸಿ ಸದಸ್ಯತ್ವ ನೀಡಿಲ್ಲ. ಪಕ್ಷದಲ್ಲಿದ್ದುಕೊಂಡೇ ಸೋಲಿಗೆ ಶ್ರಮಿಸುತ್ತಿರುವ ಗುರುರಾಜ್ ಎಸ್ ಪೂಜಾರಿ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದು ಎಚ್ಚರಿಸಿದ್ದಾರೆ.