94ಸಿಯಡಿ ಕೊಕ್ಕಡ ಹೋಬಳಿಯಲ್ಲಿ ಭ್ರಷ್ಟಾಚಾರ

ಎಸಿಬಿಗೆ ದೂರು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯಲ್ಲಿ 94ಸಿಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದ್ದು, ಕೆಲ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿ ಈ ಯೋಜನೆಯ ಮೂಲ ಉದ್ದೇಶವನ್ನೇ ಬದಲಾಯಿಸಿದ್ದಾರೆ ಎಂದು ದೂರುತ್ತಿದ್ದಾರೆ. ತಣ್ಣೀರುಪಂಥ ಗ್ರಾಮ ಪಂಚಾಯತಿನಲ್ಲಿ 94ಸಿಯಡಿ ಅಕ್ರಮವಾಗಿ ಹಕ್ಕು ಪತ್ರ ನೀಡಿರುವ ಕುರಿತು ಎಸಿಬಿಗೆ ದೂರು ನೀಡಲಾಗಿದೆ.

94ಸಿಯಡಿ ತಣ್ಣೀರುಪಂಥ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಮತ್ತು ಕಾನೂನಿಗೆ ವಿರುದ್ಧವಾಗಿ ಹಕ್ಕು ಪತ್ರ ನೀಡಲಾಗಿದೆ ಎಂದು ಆರೋಪಿಸಿ ಅಶ್ರಫ್ ಕಲ್ಲೇರಿ ಎಂಬವರು ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಹಶೀಲ್ದಾರರು, ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರು, ಸ ನಂ. 120-2ಪಿ1ರಲ್ಲಿ 8 ಸೆಂಟ್ಸ್ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ 94ಸಿ ಯೋಜನೆಯಡಿ ಮಂಜೂರುಗೊಳಿಸಲಾಗಿದೆ. ಈ ಮಂಜೂರಾತಿಯಲ್ಲಿ ಕಂದಾಯ ಇಲಾಖೆಯವರು ಶಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದು, ಈ ಮಂಜೂರಾತಿಗೆ ಸಂಬಂಧಿಸಿ ತಾನು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯಲ್ಲಿ ನಕ್ಷೆ, ಪೋಟೋ, ಕಟ್ಟಡದ ಡೋರ್ ನಂಬರ್ ಯಾವುದೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.