ರಾಜೀವ್ ಚಂದ್ರಶೇಖರ್ ವಿರುದ್ಧ ಸುಳ್ಳು ಸುದ್ದಿ ಹರಡಿದ ದೂರು

ತಿರುವನಂತಪುರಂ : ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಚೂರಕ್ಕಾಡ್ ಬಿಜು ಹತ್ಯೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಕೇರಳ ಬಿಜೆಪಿ ಅಧ್ಯಕ್ಷ ಕುಮ್ಮೊನ್ ರಾಜಶೇಖರನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ  ಕೇರಳ ಎನ್ಡಿಎ ಉಪಾಧ್ಯಕ್ಷ ಹಾಗೂ ಮೀಡಿಯಾ ಮೊಘಲ್ ರಾಜೀವ್ ಚಂದ್ರಶೇಖರ್ ಅವರ ವಿರುದ್ಧ ಕೂಡ ಇಂತಹುದೇ ದೂರು ದಾಖಲಾಗಿದೆ. ರಾಜೀವ ಚಂದ್ರಶೇಖರ್ `ಕನ್ನಡ ಪ್ರಭ’ ಕನ್ನಡ ದಿನಪತ್ರಿಕೆ, ಸುವರ್ಣ ಚಾನೆಲ್, ಏಷಿಯಾ ನೆಟ್ ಮತ್ತು ರಿಪಬ್ಲಿಕ್ ಎಂಬ ಇಂಗ್ಲಿಷ್ ಚಾನೆಲ್ ನಡೆಸುತ್ತಿದ್ದಾರೆ.

ಡಿವೈಎಫೈ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ವಿ ಕೆ ಸನೋಜ್ ಎಂಬವರು  ರಾಜೀವ್ ಚಂದ್ರಶೇಖರ್ ವಿರುದ್ಧ ಪೊಲೀಸ್ ವರಿಷ್ಠರ ಬಳಿ ದೂರು ದಾಖಲಿಸಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಸಿಪಿಐಎಂ ಬೆಂಗಲಿಗರು  ಆಸ್ಪತ್ರೆ  ಹಾಗೂ ಅಂಬುಲೆನ್ಸ್ ಒಂದಕ್ಕೆ ಹಾನಿಗೈದಿದ್ದರು ಎಂದು ಹೇಳುವ ಟ್ವೀಟ್ ಒಂದನ್ನು ಚಂದ್ರಶೇಖರ್ ರಿಟ್ವೀಟ್ ಮಾಡಿದ್ದರೆನ್ನಲಾಗಿದೆ. ರಾಜೀವ್ ವಿರುದ್ಧ ಸೆಕ್ಷನ್ 153(ಎ) ಅನ್ವಯ ದೂರು ದಾಖಲಿಸಬೇಕೆಂದು ದೂರುದಾರರು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜೀವ್, ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರಕಾರ ತನ್ನನ್ನು ಬೆದರಿಸಲು ಹಾಗೂ ಬಂಧಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.  “ಈ ಹಿಂದೆ ಕೂಡ ಹಲವರು ಇದೇ ರೀತಿ ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆಲ್ಲಾ ಬೆದರುವವನು ನಾನಲ್ಲ” ಎಂದು ಅವರು ಹೇಳಿದ್ದಾರೆ.