ಸ್ವಚ್ಛತೆಯ ಹೆಸರಲ್ಲಿ ಬಾರಿಗೆ ಪಾರ್ಕಿಂಗ್ ವ್ಯವಸ್ಥೆ : ಸಾರ್ವಜನಿಕರಿಂದ ದೂರು, ಕಾಮಗಾರಿಗೆ ಬ್ರೇಕ್

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಉಚ್ಚಿಲ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮುಖಂಡತ್ವದಲ್ಲಿ, ಬಡಾ ಎರ್ಮಾಳಿನಲ್ಲಿ ಸ್ಥಳಾಂತರಗೊಂಡ ಬಾರ್ ಒಂದಕ್ಕೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೀರಿನ ಕೊಳದ ಜಾಗವನ್ನು ಬಳಸಿಕೊಂಡು ಅಕ್ರಮ ಎಸಗುತ್ತಿದ್ದಾರೆ ಎಂಬ ದೂರಿನನ್ವಯ ಸ್ಥಳಕ್ಕೆ ಆಗಮಿಸಿದ ಕಾಪು ಕಂದಾಯ ಅಧಿಕಾರಿ (ಆರ್ ಐ) ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸುವ ಮೂಲಕ ಕಾಮಗಾರಿಗೆ ತಡೆಯೊಡ್ಡಲಾಗಿದೆ.

ಈ ಬಗ್ಗೆ ಮಾತನಾಡಿದ ದಲಿತ ಮುಖಂಡ ಶೇಖರ್ ಹೆಜಮಾಡಿ, “ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷ ಸಂದರೂ ಸರ್ಕಾರಕ್ಕೆ ಬಡವರಿಗೆ ಮನೆ ನಿವೇಶನ ನೀಡುವುದಕ್ಕೆ ಸಾಧ್ಯವಾಗಿಲ್ಲ, ಆದರೂ ಸ್ವಹಿತಕ್ಕಾಗಿ ಸರ್ಕಾರಿ ಭೂಮಿಯನ್ನು ದುರ್ಬಳಕೆ ಮಾಡುತ್ತಲೇ ಇದ್ದಾರೆ. ತಕ್ಷಣ ಉಡುಪಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನೀರಿನ ಕೆರೆಯ ಜಾಗವನ್ನು ಸ್ವಚ್ಛತೆಯ ಹೆಸರಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಡೆಸುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕುವುದು ಮಾತ್ರವಲ್ಲ ಈ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾದ ಅಭಿವೃದ್ಧಿ ಅಧಿಕಾರಿಯನ್ನು ತನಿಖೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ನಿವಾಸಿ ಸರಸ್ವತಿ ಎಂಬವರು ಮಾತನಾಡಿ, “ಸ್ವಚ್ಛತೆಯ ಹೆಸರಲ್ಲಿ ಸರ್ಕಾರಿ ಕೊಳದ ಜಾಗವನ್ನು ಮಣ್ಣು ಹಾಕಿ ಮುಚ್ಚಿರುವುದು ಸರಿಯಾದ ಕ್ರಮವಲ್ಲ. ಅದರಲ್ಲೂ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಗ್ರಾ ಪಂ ಸದಸ್ಯರೇ ಈ ಅಕ್ರಮಕಾರ್ಯದಲ್ಲಿ ತೊಡಗಿರುವುದು ಶೋಚನೀಯ ಸಂಗತಿ” ಎಂದಿದ್ದಾರೆ.

ಒತ್ತಾಯ ಪೂರ್ವಕ ಸಹಿ ಸಂಗ್ರಹ

ಗ್ರಾ ಪಂ ಸಹಿತ ಯಾವುದೇ ಇಲಾಖೆಯ ಪರವಾನಿಗೆ ಪಡೆಯದೆ ಏಕಾಏಕಿ ಕೆಲವರನ್ನು ಸೇರಿಸಿಕೊಂಡು ಕೇವಲ ಬಾರ್ ಸಮೀಪದಲ್ಲಿ ಮಾತ್ರ ರಸ್ತೆ ಅಗಲೀಕರಣ ನಡೆಸುತ್ತಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದಂತೆ, ಇದೀಗ ರಸ್ತೆಯಲ್ಲಿ ಹೋಗಿ ಬರುತ್ತಿರುವವರಲ್ಲಿ ಸಹಿತ ಬಾರಿಗೆ ಕುಡಿಯಲು ಬರುವವರಿಂದ ಒತ್ತಾಯ ಪೂರ್ವಕ ಸಹಿ ಸಂಗ್ರಹ ನಡೆಸುತ್ತಿದ್ದು, ತಾವು ಮಾಡಿದ ಅಕ್ರಮವನ್ನು ಸಕ್ರಮ ಮಾಡಲು ಹೊರಟಂತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಸರಸ್ವತಿ ಹೇಳಿದ್ದಾರೆ.

“ಜನರ ಬಹಳಷ್ಟು ಹಿಂದಿನ ಬೇಡಿಕೆ ಈಡೇರಿಸುವುದಕ್ಕಾಗಿ ರಸ್ತೆಯಂಚನ್ನು ಸ್ವಚ್ಛಗೊಳಿಸಿ ಅಗಲೀಕರಣ ನಡೆಸುತ್ತಿದ್ದೇವೆ. ಈ ಬಗ್ಗೆ ನಾವು ಮೀನುಗಾರಿಕಾ ರಸ್ತೆಯಾಗಿದ್ದರಿಂದ ಸಂಬಂಧಪಟ್ಟ ಇಲಾಖೆಗೂ ಅಗಲೀಕರಣ ನಡೆಸುವಂತೆ ಅರ್ಜಿ ನೀಡಿದ್ದು, ಅವರು ಸ್ಪಂದಿಸದ ಕಾರಣ ಸಾರ್ವಜನಿಕರೊಂದಿಗೆ ಸೇರಿ ಈ ಕಾಮಗಾರಿ ನಡೆಸುತ್ತಿದ್ದೇವೆ. ಮಾಡಿದ್ದು ತಪ್ಪು ಎಂಬುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರೆ ಹಾಕಿದ ಮಣ್ಣನ್ನು ತೆಗೆಯಲೂ ನಾವು ಸಿದ್ಧ ಎಂದಿದ್ದಾರೆ” ಉಚ್ಚಿಲ ಗ್ರಾ ಪಂ ಸದಸ್ಯ ಶಿವಕುಮಾರ್.