ನಗರಸಭೆ ಸದಸ್ಯರ ವಿರುದ್ಧ ಅವಹೇಳನಕಾರಿ ಸಂದೇಶ ರವಾನೆ : ದೂರು ದಾಖಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ನಗರಸಭೆ ಸದಸ್ಯರ ವಿರುದ್ಧ ವಾಟ್ಸಪ್ಪಿನಲ್ಲಿ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ ನಗರಸಭೆ ಇಂಜಿನಿಯರ್ ಮೋಹನರಾಜ್ ವಿರುದ್ಧ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರು ಶಹರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ನಗರಸಭೆ ಇಂಜಿನಿಯರ್ ಮೋಹರಾಜ್ ಅವರು ಅಕ್ಟೋಬರ್ 6ರಂದು ವಾಟ್ಸಪ್ಪಿನಲ್ಲಿ ನಗರಸಭೆಯ ಕೆಲವು ಸದಸ್ಯರ ವಿರುದ್ಧ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ್ದರು. ಇದರಿಂದ ಆಕ್ರೋಶಗೊಂಡ ಸದಸ್ಯರು, ಮೋಹನರಾಜ್ ವಿರುದ್ಧ ಅಧ್ಯಕ್ಷರಿಗೆ ದೂರಿದ್ದರು. ಅಲ್ಲದೆ ಇತ್ತೀಚೆಗೆ ನಡೆದ ಸಾಮಾನ್ಯಸಭೆಯಲ್ಲಿ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ಸದಸ್ಯ ನಂದಾ ಸಾವಂತ್ ಅವರ ವಿರುದ್ಧ ಮೋಹನರಾಜ್ ದೂರು ದಾಖಲಿಸಿ, ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕಾಗಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಮೋಹನರಾಜ್ ವಿರುದ್ಧ ದೂರು ನೀಡಿ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.