ರಸ್ತೆ ಅನುದಾನ ದುರ್ಬಳಕೆ ಮಾಡಿದ ನಿರ್ಮಿತಿ ಕೇಂದ್ರದ ವಿರುದ್ಧ ದೂರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : 26ನೇ ದೇರೆಬೈಲ್ ನೈರುತ್ಯ ವಾರ್ಡಿನ ಉರ್ವಸ್ಟೋರ್ ಮಾರ್ಕೆಟಿನಿಂದ ಕೋಟೆಕಣಿ ಪರಿಶಿಷ್ಟ ಜಾತಿ ಕಾಲೋನಿಗೆ ನಿರ್ಮಿಸಲಾದ ರಸ್ತೆಯನ್ನು ನಿರ್ಮಿತಿ ಕೇಂದ್ರವು ದಿಕ್ಕು ಬದಲಾಯಿಸಿ ಇನ್ನೊಂದು ರಸ್ತೆಗೆ ಕಳಪೆ ಕಾಮಗಾರಿ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಶಶಿಧರ ಶೆಟ್ಟಿ ಆರೋಪಿಸಿದ್ದಾರೆ.

2014-15ನೇ ಸಾಲಿನಲ್ಲಿ 25 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ಕೋಟೆಕಣಿಯಿಂದ ಚಿಲಿಂಬಿ ಸಂಪರ್ಕಿಸುವ ರಸ್ತೆಯನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಪೂರ್ಣಗೊಳಿಸಲಾಗಿತ್ತು. ಇಲ್ಲಿನ ದಲಿತರ ಕಾಲೊನಿ ಮಂದಿಗೆ ಉರ್ವ ಸ್ಟೋರಿಗೆ ತೆರಳಲು ಅನುಕೂಲವಾಗಲೆಂದು ಮಂಜೂರು ಮಾಡಿದ ರಸ್ತೆಯ ಪಥ ಬದಲಿಸಿ ಕೋಟೆಕಣಿ-ಚಿಲಿಂಬಿ ರಸ್ತೆಗೆ ವಸತಿಸಮುಚ್ಛಯಗಳ ನಿವಾಸಿಗಳಿಗೆ ಅನುಕೂಲಕರವಾಗಲೆಂದು ದಿಕ್ಕು ತಪ್ಪಿಸಲಾಗಿದೆ. ಆದರೆ ಅದೂ ಕಳಪೆಯಾಗಿದೆ ಎಂದು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸುಮಾರು 800 ಮೀಟರ್ ಉದ್ದದ ರಸ್ತೆಗೆ ಮಾರುಕಟ್ಟೆ ಮತ್ತು ಕಾಲೊನಿ ನಡುವಿನ ರಸ್ತೆಗೆ ಅನುದಾನ ಮಂಜೂರು ಮಾಡಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟ ಅನುದಾನವನ್ನು ಅಧಿಕಾರಿಗಳು ದುರುಪಯೋಗ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ನಿರ್ಮಿತಿ ಕೇಂದ್ರಕ್ಕೆ ಈ ಕಾಮಗಾರಿಯನ್ನು ವಹಿಸಿದ್ದು, ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರ ಶಾಸಕ ಜೆ ಆರ್ ಲೋಬೋ ಇದಕ್ಕೆ ಶಿಫಾರಸು ಮಾಡಿದ್ದರು” ಎಂದು ಶಶಿಧರ ಶೆಟ್ಟಿ ಮಾಧ್ಯಮಗಳಿಗೆ ವಿವರಿಸಿದರು.

“ರಸ್ತೆ ಸಂಪೂರ್ಣ ಕಳಪೆಮಟ್ಟದ್ದಾಗಿದೆ. ಈ ರಸ್ತೆಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ತಾವು ನಿರ್ಮಿತಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ದೂರು ನೀಡಲಾಗುವುದು” ಎಂದು ಹೇಳಿದರು. ಯೋಜನಾ ನಕ್ಷ ಬದಲಾಯಿಸಿ ಕಾಮಗಾರಿ ನಡೆಸಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

LEAVE A REPLY