ಕೊಶಮಟ್ಟಂ ಫೈನಾನ್ಸಿಂದ ಗ್ರಾಹಕರಿಗೆ ವಂಚನೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಕಳೆದ 3 ವರ್ಷಗಳಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಶಮಟ್ಟಂ ಫೈನಾನ್ಸಿನಲ್ಲಿ ಗ್ರಾಹಕರು ಇಟ್ಟ ಬಂಗಾರದಲ್ಲಿ ಅವ್ಯವಹಾರ ನಡೆದಿದ್ದು, 22 ಜನರಿಗೆ ಅಂದಾಜು 16 ಲಕ್ಷ ರೂ ನೀಡದೆ ಮೋಸ ಮಾಡಲಾಗಿದೆ ಎಂದು ಗ್ರಾಹಕರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂಗೀತಾ ಪ್ರವೀಣ ನಾಯ್ಕ 130 ಗ್ರಾಂ ಬಂಗಾರವನ್ನು ಅಡವಿಟ್ಟು 5.5 ಲಕ್ಷ ರೂ ಸಾಲ ಪಡೆದಿದ್ದರು. ಈಗಾಗಲೇ ಅರ್ಧದಷ್ಟು ಹಣ ಕಟ್ಟಲಾಗಿತ್ತು. ಉಳಿದ ಹಣವನ್ನು ನಗದು ನೀಡಿ ಬಂಗಾರವನ್ನು ಬಿಡಿಸಿಕೊಳ್ಳಲು ಕಳೆದ ಹಲವು ತಿಂಗಳುಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗದೆ ಹೊನ್ನಾವರದಿಂದ ನಿಮ್ಮ ಬಂಗಾರ ಹರಾಜಿಗೆ ಬಂದಿದೆ ಎಂದು ನೋಟಿಸ್ ನೀಡಿದ್ದಾರೆ. ಆಭರಣ ಇಡುವ ಸಂದರ್ಭದಲ್ಲಿ ಇದ್ದ ವ್ಯವಸ್ಥಾಪಕರು ಈಗ ಬೇರೆ ಕಡೆಗೆ ವರ್ಗವಾಗಿದ್ದಾರೆ. ಮೂರೇ ತಿಂಗಳಲ್ಲಿ ಮೂವರನ್ನು ವರ್ಗಾವಣೆ ಮಾಡಿರುವುದು ಅವ್ಯವಹಾರ ಖಚಿತಪಡಿಸಿದೆ.

ಫೈನಾನ್ಸಿಗೆ ಅಲೆದು ರೋಸಿ ಹೋದ ಸಂಗೀತಾ ನಾಯ್ಕ ಸೋಮವಾರ ತನ್ನಂತೆಯೇ ಮೋಸ ಹೋದ 22 ಜನರೊಂದಿಗೆ ಬಂದು ಫೈನಾನ್ಸಿನಲ್ಲಿದ್ದ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗಲಾಟೆಯಾಗುತ್ತಿದ್ದಂತೆಯೇ ಪೊಲೀಸರು ಆಗಮಿಸಿ, “ಇಲ್ಲಿ ಏನೇ ಗಲಾಟೆ ಮಾಡಿದರೂ ಪ್ರಯೋಜನವಿಲ್ಲ. ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿ” ಎಂದು ಗಲಾಟೆ ಸ್ಥಗಿತಗೊಳಿಸಿದರು. ನಂತರ ಮೋಸ ಹೋದವರು ಠಾಣೆಗೆ ಬಂದು ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

LEAVE A REPLY