ದ ಕ ಡೀಸಿ ವಿರುದ್ಧ ದೂರು

`ಅಕ್ರಮ ಮರಳುಗಾರಿಕೆ ತಡೆಯಲು ವಿಫಲ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡಾ ವ್ಯಾಪಕ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ದೂರನ್ನು ನಿರ್ಲಕ್ಷ್ಯಿಸಿದ್ದಾರೆ. ಸರಕಾರಕ್ಕೆ ಕೋಟ್ಯಂತರ ರೂ ನಷ್ಟ ಉಂಟುಮಾಡಿದ್ದಾರೆ” ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಂಚಾಲಕ ಶಶಿಧರ ಶೆಟ್ಟಿ ಆರೋಪಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿಷೇಧಿಸುವಂತೆ ನಾವು ಈಗಾಗಲೇ ಹಲವು ದೂರುಗಳನ್ನು ದಾಖಲೆ ಸಮೇತ ನೀಡಿದ್ದೇವೆ. ಸಿಡಿಯಲ್ಲಿ ಮಾಹಿತಿ ಮಾಡಿ ಕೊಟ್ಟಿದ್ದೇವೆ. ಹೀಗಿದ್ದರೂ ಅಕ್ರಮ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಲಾಗಿಲ್ಲ. ಜಿಲ್ಲೆಯಲ್ಲಿ ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ 19 ಸ್ಯಾಂಡ್ ಬಾರ್‍ಗಳಲ್ಲಿ ಮರಳುಗಾರಿಕೆ ನಡೆಸಲು 432 ಮಂದಿಗೆ ಅನುಮತಿ ನೀಡಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಅವರು ಮರಳುಗಾರಿಕೆ ನಡೆಸುತ್ತಿದ್ದಾರೆ.

ಚೆನ್ನೈ ಹಸಿರು ಪೀಠದಲ್ಲಿ ಸಲ್ಲಿಸಿದ್ದ ದೂರಿನಂತೆ ಮರಳುಗಾರಿಕೆಯನ್ನು ನಿಷೇಧಿಸುವಂತೆ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶವನ್ನೂ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆದೇಶದ ಪ್ರತಿಯೊಂದು ಜಿಲ್ಲಾಧಿಕಾರಿಯವರಿಗೆ ನೀಡಿ ಮರಳುಗಾರಿಕೆಯನ್ನು ನಿಷೇಧಿಸುವಂತೆ ಮನವಿ ಮಾಡಿಕೊಂಡಿದ್ದರೂ ಏನೂ ಪ್ರಯೋಜನವಾಗಿಲ್ಲ. ನಮ್ಮ ದೂರನ್ನು ಜಿಲ್ಲಾಧಿಕಾರಿ ಜಗದೀಶ್ ನಿರ್ಲಕ್ಷ್ಯಿಸಿದ್ದಾರೆ” ಎಂದವರು ಆಕ್ರೋಶ ವ್ಯಕ್ತಪಡಿಸಿದರು.