10 ರೂ ನಾಣ್ಯ ಸ್ವೀಕರಿಸಲು ನಿರಾಕರಿಸಿದ ಕಾರ್ಪ್ ಬ್ಯಾಂಕ್ ಮೆನೇಜರ್ ವಿರುದ್ಧ ದೂರು

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ್ದ 10 ರೂ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ ಅಲಂಗಾರಿನ ಕಾರ್ಪೊರೇಶನ್ ಬ್ಯಾಂಕ್ ವಿರುದ್ಧ ಗ್ರಾಹಕರೊಬ್ಬರು ಡೀಸಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ವೃತ್ತಿಯಲ್ಲಿ ಬಸ್ ಚಾಲಕರಾಗಿರುವ ಬನ್ನಡ್ಕ ನಿವಾಸಿ ನೇಮಿರಾಜ್ ಬಲ್ಲಾಳ್ ತನ್ನ ಬಳಿಯಿದ್ದ 10 ರೂಪಾಯಿಯ 370 ನಾಣ್ಯಗಳನ್ನು ಅಲಂಗಾರಿನ ಕಾರ್ಪೊರೇಶನ್ ಬ್ಯಾಂಕಿನಲ್ಲಿರುವ ತನ್ನ ಖಾತೆಗೆ ಜಮೆ ಮಾಡಲು ಹೋದಾಗ ಅಲ್ಲಿನ ಕ್ಯಾಶಿಯರ್ “ಮೆನೇಜರ್ ಬಳಿ ಮಾತನಾಡಿ;” ಎಂದು ಕಳಿಸಿದರು. ಮೆನೇಜರ್ ಬಳಿ ಹೋದಾಗ “ಇಷ್ಟು ನಾಣ್ಯ ಎಲ್ಲಿಂದ ಬಂತು?” ಎಂಬ ಅಸಂಬದ್ಧ ಪ್ರಶ್ನೆ ಕೇಳಿ “ಅರ್ಧ ತಾಸು ಬಿಟ್ಟು ಬನ್ನಿ” ಎಂದು ಹೇಳಿದರು. ಇದರಿಂದ ಅಸಮಧಾನಗೊಂಡ ಗ್ರಾಹಕ ಕೂಡಲೆ ಡೀಸಿ ಮೊಬೈಲಿಗೆ ಕರೆ ಮಾಡಿ ದೂರು ಕೊಟ್ಟರು.

ನಂತರ ಡೀಸಿ ಕಚೇರಿಯಿಂದ ಕೊಟ್ಟ ಮಾಹಿತಿಯಂತೆ ಮಂಗಳೂರಿನ ಕಾರ್ಪೊರೇಶನ್ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರಿಗೆ ಗ್ರಾಹಕ ದೂರು ನೀಡಿದರು. ನಂತರ ಅರ್ಧ ತಾಸು ಬಿಟ್ಟು ಮತ್ತೆ ಮೆನೇಜರ್ ಬಳಿ ಹೋದಾಗ ಗ್ರಾಹಕನೊಂದಿಗೆ ಸೌಜನ್ಯದಿಂದ ನಡೆದುಕೊಂಡ ಅವರು 10 ರೂ ನಾಣ್ಯಗಳನ್ನು ಸ್ವೀಕರಿಸಲು ಒಪ್ಪಿಕೊಂಡರೆನ್ನಲಾಗಿದೆ.