ಫೇಸ್ಬುಕ್ಕಲ್ಲಿ ಫೋಸ್ಟ್ ಹಾಕಿದವನ ವಿರುದ್ಧ ದೂರು

ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಚಿತ್ರ

ಮುಸ್ಲಿಮರ ಆಕ್ರೋಶಕ್ಕೆ ಕಾರಣವಾದ ಮಕ್ಕಾದಲ್ಲಿ ಶಿವಲಿಂಗ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಮುಸ್ಲಿಮರ ಆರಾಧನಾ ಕೇಂದ್ರ ಮಕ್ಕಾದ ಚಿತ್ರವನ್ನು ಅಪವಿತ್ರಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಬಗ್ಗೆ ವ್ಯಕ್ತಿಯೊಬ್ಬ ವಿರುದ್ಧ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ವಗ್ಗ ನಿವಾಸಿ ಧೀರಜಕುಮಾರ್ ಎಂಬಾತ ತನ್ನ ಫೇಸ್ಬುಕ್ ಅಕೌಂಟಿನಲ್ಲಿ ಮಕ್ಕಾವನ್ನು ಶಿವಲಿಂಗಕ್ಕೆ ಹೋಲಿಸಿ ಈ ಹಿಂದೆ ಮಕ್ಕಾದಲ್ಲಿ ಶಿವಲಿಂಗ ಇತ್ತು. ಇದಕ್ಕೆ ಇತಿಹಾಸವಿದೆ ಎಂಬಿತ್ಯಾದಿ ಕತೆಗಳನ್ನು ಸೃಷ್ಟಿಸಿ ಹರಿಯಬಿಟ್ಟಿದ್ದ ಎನ್ನಲಾಗಿದೆ. ಇದು ಮುಸ್ಲಿಮ್ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿರೋಧಗಳೂ ವ್ಯಕ್ತವಾಗಿತ್ತು.

ಈ ಬಗ್ಗೆ ಮಂಗಳವಾರ ಬಾಂಬಿಲ ನಿವಾಸಿ ಮುಸ್ತಫಾ ಎಂಬವರು ಧೀರಜ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರಂಭದಲ್ಲಿ ಮುಸ್ತಫಾರ ದೂರು ಸ್ವೀಕರಿಸಲು ಬಂಟ್ವಾಳ ಗ್ರಾಮಾಂತರ ಪೊಲೀಸರು ನಿರಾಕರಿಸಿದ್ದರು ಎನ್ನಲಾಗಿದೆ. ಈ ಸಂದರ್ಭ ನೂರಾರು ಸಂಖ್ಯೆಯ ಮುಸ್ಲಿಮರು ಗ್ರಾಮಾಂತರ ಠಾಣೆಯ ಮುಂದೆ ಜಮಾಯಿಸಿದ್ದರು. ಬಳಿಕ ಪರಿಸ್ಥಿತಿ ಕೈ ಮೀರುವುದನ್ನು ಮನಗಂಡ ಠಾಣಾಧಿಕಾರಿ ರಕ್ಷಿತ್ ಎ ಕೆ ಅವರು ಮುಸ್ತಪಾ ನೀಡಿದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಜಮಾಯಿಸಿದ ಜನ ವಾಪಾಸು ತೆರಳಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ವಿರೂಪಗೊಳಿಸುವ ಕುಕೃತ್ಯ ಈ ಹಿಂದೆಯೂ ಹಲವು ಬಾರಿ ನಡೆದಿದ್ದು, ಇದರ ಹಿಂದೆ ಸಾಮಾಜಿಕ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಮೃದು ಧೋರಣೆ ಹಾಗೂ ಕಠಿಣ ಕ್ರಮ ಕೈಗೊಳ್ಳದಿರುವುದೇ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಲು ಕಾರಣ ಎಂದು ದೂರಿರುವ ದೂರುದಾರರು ಆರೋಪಿ ಧೀರಜ್ ವಿರುದ್ಧ ಕಠಿಣ ಕಲಂನಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.