ಪಿಲಿಕುಳ ತ್ರಿಡಿ ತಾರಾಲಯ ಡಿಸೆಂಬರಲ್ಲಿ ಲೋಕಾರ್ಪಣೆ

ಮಂಗಳೂರು : ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂತಾರಾಷ್ಟೀಯ ಮಟ್ಟದ ತ್ರಿಡಿ ತಾರಾಲಯದ ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗಿದ್ದು, ಡಿಸೆಂಬರಿನಲ್ಲಿ ಉದ್ಘಾಟಿಸುವ ಯತ್ನ ನಡೆದಿದೆ ಎಂದು ಯೋಜನೆ, ಸಾಂಖ್ಯಿಕ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎಂ ಆರ್ ಸೀತಾರಾಂ ಹೇಳಿದರು.

ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ರಿಡಿ ಪ್ಲಾನಿಟೋರಿಯಂ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ತಾರಾಲಯದ ಗುಮ್ಮಟ ಮತ್ತು ಪ್ರೊಜೆಕ್ಞನ್ ಸಿಸ್ಟಂಗಳ ಸರಬರಾಜು ಹಾಗೂ ಅಳವಡಿಕೆಗೆ ಅಂತಾರಾಷ್ಟ್ರೀಯ ಟೆಂಡರ್ ಕರೆದು ಅಮೆರಿಕದ ಮೆ ಇವಾನ್ಸ್ ಆಂಡ್ ಸದರ್ ಲ್ಯಾಂಡ್ ಕಂಪೆನಿ ಟೆಂಡರ್ ಅಂತಿಮ ಮಾಡಿದೆ. ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದ್ದು, ಅಕ್ಟೋಬರ್ ಅಂತ್ಯಕ್ಕೆ ಉಪಕರಣಗಳ ಅಳವಡಿಕೆ ಪೂರ್ಣಗೊಳ್ಳಲಿದೆ. ಡಿಸೆಂಬರಿನಲ್ಲಿ ಲೋಕಾರ್ಪಣೆಗೆ ಯತ್ನಿಸಲಾಗುವುದು” ಎಂದರು.

“ಈ ತ್ರಿಡಿ ತಾರಾಲಯ ಪ್ರಪಂಚದಲ್ಲಿಯೇ 21ನೇ ತಾರಾಲಯವಾಗಿದ್ದು, ಭಾರತದಲ್ಲಿ ಪ್ರಥಮ ತ್ರಿಡಿ ತಾರಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಟ್ಟು 35.69 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ತಾರಾಲಯದಲ್ಲಿ 180 ಮಂದಿ ಏಕಕಾಲದಲ್ಲಿ ವೀಕ್ಷಿಸಬಹುದಾದ ತ್ರಿಡಿ ಥಿಯೇಟರ್ ವ್ಯವಸ್ಥೆ ಇದೆ. ಖಗೋಳಶಾಸ್ತ್ರ, ವ್ಯೋಮ ಶಾಸ್ತ್ರ ಇತ್ಯಾದಿಗಳಿಗೆ ಫಿಲ್ಮ್ ಶೋ ಹಾಗೂ ಪೂರಕ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ” ಎಂದರು.

ಈ ಸಂದರ್ಭ ಮಾತನಾಡಿದ ಶಾಸಕ ಜೆ ಆರ್ ಲೋಬೊ, “ಮೀನುಗಾರಿಕೆ ಇಲಾಖೆಯಿಂದ 15 ಕೋಟಿ ರೂ ವೆಚ್ಚದಲ್ಲಿ ಮತ್ಸ್ಯಾಲಯ ನಿರ್ಮಾಣವಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯು ಅರ್ಬನ್ ಇಕೋ ಪಾರ್ಕ್ ನಿರ್ಮಾಣಕ್ಕೆ 18 ಕೋಟಿ ರೂ ಮಂಜೂರು ಮಾಡಿದೆ” ಎಂದರು.