ಪಿಗ್ಮಿ ಕಲೆಕ್ಟರ್ ಮಾಧವ ಉಳ್ಳಾಲ್ ಹಸಿರು ಪ್ರೇಮಕ್ಕೆ 19,000 ಗಿಡಗಳೇ ಸಾಕ್ಷಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಳೆದ 25 ವರ್ಷಗಳಿಂದ  ನಗರ ಮತ್ತು ನಗರದ ಹೊರವಲಯದಲ್ಲಿ ಹಸಿರು ಬೆಳೆಯುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಮಾಧವ ಉಳ್ಳಾಲ್ ಇಂದು ನಗರದಾದ್ಯಂತ ಸುಮಾರು 19,000 ಗಿಡಗಳ ಜನ್ಮದಾತರಾಗಿದ್ದಾರೆ.

ವೃತ್ತಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿರುವ ಮಾಧವ ಉಳ್ಳಾಲ್, ಕಳೆದ 25 ವರ್ಷಗಳಿಂದ ಶಾಲಾ-ಕಾಲೇಜುಗಳು, ಆರಾಧನಾ ಮಂದಿರಗಳು, ಸ್ಮಶಾನದ ಮೈದಾನಗಳು, ಚಿತಾಗಾರಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುತ್ತಾ ಬಂದಿದ್ದು, ಇದೀಗ ಅವರು ಕೈಯಾರೆ ನೆಟ್ಟು ಬೆಳೆಸಿದ ಗಿಡಗಳ ಸಂಖ್ಯೆ 19,000ದ ಗಡಿಯನ್ನು ದಾಟಿದೆ.

ಇದೀಗ ಮಾಧವ ಉಳ್ಳಾಲ್ ಒಂದು ವಾರದಲ್ಲಿ ಐದು ಮನೆಗಳ ವರಾಂಡದಲ್ಲಿ ತಲಾ ಒಂದು ಗಿಡವನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಹೀಗೆ ಅವರು 12 ವಾರದಲ್ಲಿ 60 ಗಿಡಗಳನ್ನು ನೆಡುತ್ತಾರೆ.

ಮಾಧವ ಉಳ್ಳಾಲ್ ತನ್ನ ಗ್ರೀನ್ ಪ್ಲಾಂಟೇಷನ್ ಅಭಿಯಾನದ ಅಂಗವಾಗಿ ಮೊದಲ ಗಿಡವನ್ನು ಸೋಮವಾರ ಕದ್ರಿ ನವನೀತ್ ಶೆಟ್ಟಿ ಮನೆ ವರಾಂಡದಲ್ಲಿ ನೆಟ್ಟಿದ್ದಾರೆ.

ಪ್ರಸಕ್ತ ಈ ಉದ್ದೇಶಕ್ಕೆ ಸುಮಾರು 45 ಮನೆಗಳನ್ನು ಆಯ್ಕೆ ಮಾಡಿದ್ದಾರೆ. ಇದು ಗಿಡ ನೆಡಲು ಸೂಕ್ತ ಸಮಯವಲ್ಲ ಎಂದು ಅವರಿಗೆ ತಿಳಿದಿದ್ದರೂ,  ಅವರ ಹಸಿರು ಪ್ರೇಮ ಇದಕ್ಕೆ ತಡೆಯೊಡ್ಡಿಲ್ಲ. ನೆಟ್ಟ ಗಿಡಗಳಿಗೆ ನೀರು ಹಾಕುವಂತೆ ಮನೆ ಮಾಲಿಕರನ್ನು ಒತ್ತಾಯಿಸಲಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಬಂಟ್ಸ್ ಹಾಸ್ಟೆಲ್ ಬಳಿ ಮನೆಯೊಂದರ ವರಾಂಡದಲ್ಲಿ ನೆಟ್ಟಿರುವ ಸ್ಟಾರ್ ಫ್ರುಟ್ ಗಿಡದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮಾಧವ ಬಳ್ಳಾಲ್, ಗಿಡ ಈಗ ಮನೆ ಮಾಲಿಕರಿಗೆ ಹಣ್ಣುಗಳನ್ನು ನೀಡುತ್ತಿದೆ, ಜೊತೆಗೆ ಹಕ್ಕಿಗಳು, ಅಳಿಲುಗಳು, ಬಾವಲಿಗಳಿಗೆ ಆಹಾರ ನೀಡುತ್ತಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಸುಮಾರು 150 ಹಣ್ಣು ನೀಡಿದೆ ಮತ್ತು ಈ ಬಾರಿ 250ಕ್ಕೂ ಅಧಿಕ ಹಣ್ಣುಗಳಾಗಿವೆ ಎಂದು ಅವರು ಹೇಳಿದ್ದಾರೆ.

ಮಾಧವ ಬಳ್ಳಾಲ್ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆ ತನಕ ಪಿಗ್ಮಿ ಸಂಗ್ರಹದಲ್ಲಿ ತೊಡಗಿರುತ್ತಾರೆ. ಮುಂಜಾನೆಯ ಸಮಯವನ್ನು ಗಿಡ ನೆಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಳ್ಳಾಲ್, ಸರ್ಕಾರ ಅಭಿವೃದ್ದಿ ಕೆಲಸಗಳ ನೆಪದಲ್ಲಿ ಮರಗಳನ್ನು ಕಡಿಯುತ್ತಿರುವುದನ್ನು ಅಸಹಾಯಕರಾಗಿ ವೀಕ್ಷಿಸುತ್ತಿದ್ದಾರೆ.

2003ರಲ್ಲಿ ಉಳ್ಳಾಲ ಪರಿಸರದಲ್ಲಿ ಸುಮಾರು 2,000 ಗಿಡಗಳನ್ನು ನೆಟ್ಟಿದ್ದು,  ಇವುಗಳಲ್ಲಿ 200 ಮರಗಳು ತೊಕ್ಕೊಟ್ಟಿನಿಂದ ಉಳ್ಳಾಲ ಸರ್ಕಲ್‍ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಭರಾಟೆಯಲ್ಲಿ ನೆಲಕ್ಕುರುಳಿದವು. ಅದಲ್ಲದೆ 2004ರಲ್ಲಿ ಉಳ್ಳಾಲ ಚಿತಾಗಾರದ ಬೆಂಕಿ ಸುಮಾರು 126 ಮರಗಳನ್ನು ಬಲಿತೆಗೆದುಕೊಂಡಿತು ಎಂದು ಬಳ್ಳಾಲ್ ನೋವಿನಿಂದ ಹೇಳಿದ್ದಾರೆ.