ಫೋಟೋಗ್ರಾಫರ್ ಅನ್ವರ್ ವಿಧಿವಶ

ಮಂಗಳೂರು : ನಗರದ ಖ್ಯಾತ ಪತ್ರಿಕಾ ಛಾಯಾಚಿತ್ರಗ್ರಾಹಕ ಅಹಮ್ಮದ್ ಅನ್ವರ್ (55) ಬಲ್ಮಠದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ವಿಧಿವಶರಾದರು. ಅನ್ವರ್ ಅವರು ಅತ್ಯುತ್ತಮ ಛಾಯಾಚಿತ್ರಗ್ರಾಹಕರಷ್ಟೇ ಅಲ್ಲದೇ, ಕವಿತೆ ಹಾಗೂ ಸಣ್ಣ ಕಥೆಗಳನ್ನೂ ಬರೆಯುತ್ತಿದ್ದರು.

ಇವರು ಬೆಂಗರೆಯಲ್ಲಿ ನೆಲೆಸಿದ್ದು, ಕಳೆದ ಹಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ತಾನು ತೆಗೆದ ಅಪೂರ್ವ ಚಿತ್ರಗಳನ್ನು ಹಲವು ವೇದಿಕೆಗಳಲ್ಲಿ ಇವರು ಪ್ರದರ್ಶನ ನಡೆಸಿದ್ದರು. ನಗರದ ಪತ್ರಿಕಾಭೌವನದಲ್ಲಿ ಹಲವು ಬಾರಿ ಇವರ ಛಾಯಾಚಿತ್ರಗಳು ಪ್ರದರ್ಶನ ಕಂಡಿದ್ದವು. 2015ರಲ್ಲಿ ಸ್ಟ್ರೀಟ್ ಲೈಫ್ ಎನ್ನುವ ಪ್ರದರ್ಶನ ನಗರದಲ್ಲಿ ಏರ್ಪಡಿಸಲಾಗಿತ್ತು.

ಕನ್ನಡ, ಉರ್ದು, ಬ್ಯಾರಿ ಭಾಷೆಗಳಲ್ಲಿ ಹಿಡಿತ ಹೊಂದಿದ್ದ ಅವರು, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದಿಂದ ಅತ್ತಿಮಬ್ಬೆ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ ಪಡೆದಿದ್ದರು.