ಮಂಗಳೂರು ನಗರಪಾಲಿಕೆ ವ್ಯಾಪ್ತಿ ಸಮಸ್ಯೆ ಬಗೆಹರಿಸಲು ಫೋನ್-ಇನ್ ಕಾರ್ಯಕ್ರಮ

ನಮ್ಮ ಪ್ರತಿನಿಧಿ ವರದಿ

 ಮಂಗಳೂರು : “ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡುಗಳಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಹಾಗೂ ಅಧಿಕಾರಿಗಳು ಕೂಡಾ ಚುರುಕಾಗಿ ಕೆಲಸ ಮಾಡಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಫೋನ್ ಇನ್ ಕಾರ್ಯಕ್ರಮ ಆರಂಭಿಸಲಾಗಿದೆ” ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಮೇ 23ರಿಂದ ಫೋನ್ ಇನ್ ಕಾರ್ಯಕ್ರಮ ಆರಂಭವಾಗಲಿದೆ. ಮೇ 23ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಡೆಯಲಿರುವ ಈ ಫೋನ್-ಇನ್ ಕಾರ್ಯಕ್ರಮದಲ್ಲಿ ಜನರು ದೂರವಾಣಿ ಸಂಖ್ಯೆ 2220301 ಮತ್ತು 2220318ಕ್ಕೆ ಕರೆ ಮಾಡಿ ಮಾತನಾಡಬಹುದಾಗಿದೆ. ಪ್ರತಿ ತಿಂಗಳು ಈ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಜನತೆ ನೇರವಾಗಿ ಪಾಲಿಕೆಯ ಆಯುಕ್ತರು, ಇಂಜಿನಿಯರುಗಳು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಸಂಪರ್ಕಿಸಿಕೊಂಡು ಕೆಲಸ ಮಾಡಲು ಇದು ನೆರವಾಗಲಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಪ್ರತ್ಯೇಕ ತಂಡವೊಂದನ್ನು ರೂಪಿಸಿ ಅದಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಖರೀದಿಸಲಾಗುವುದು” ಎಂದರು.