`ಪಾದ್ರಿಗಳು ಸಲಿಂಗಕಾಮಿಗಳು, ಮಕ್ಕಳ ಶೋಷಕರು’ ಎಂದ ಫಿಲಿಪ್ಪೀನ್ಸ್ ಅಧ್ಯಕ್ಷ

Rodrigo Duterte

ಸರಕಾರದ ಡ್ರಗ್ಸ್ ಸಮರ ಟೀಕಿಸಿದ ಕ್ರೈಸ್ತ ಧರ್ಮಗುರುಗಳ ವಿರುದ್ಧ ರೊಡ್ರಿಗೊ ಕಿಡಿ

ಮನಿಲಾ : ತಾವು ಡ್ರಗ್ಸ್ ವಿರುದ್ಧ ಹೂಡಿರುವ ಸಮರವನ್ನು ಟೀಕಿಸಿರುವ ರೋಮನ್ ಕ್ಯಾಥೋಲಿಕ್ ಧರ್ಮಗುರುಗಳ ವಿರುದ್ಧ ಕೆಂಡ ಕಾರಿರುವ ಫಿಲಿಪ್ಪೀನ್ ಅಧ್ಯಕ್ಷ ರೊಡ್ರಿಗೊ ಡುಟೆರ್ಟೆ ಪಾದ್ರಿಗಳ ವಿರುದ್ಧ ಗಂಭೀರ ಆರೋಪ ಹೊರಿಸಿದ್ದು  “ಅವರು ಸಲಿಂಗಕಾಮಿಗಳಾಗಿದ್ದಾರೆ, ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ  ಹಾಗೂ ದೇಶದ ಸಮಸ್ಯೆಗಳನ್ನು ಅರಿಯಲು ವಿಫಲರಾಗಿದ್ದಾರೆ” ಎಂದು ದೂರಿದ್ದಾರೆ.

“ಇಲ್ಲಿನ ಹೆಚ್ಚಿನ ಜನರು ಕ್ಯಾಥೊಲಿಕ್ಕರು. ನೀವು ಒಬ್ಬ ಉತ್ತಮ ಪಾದ್ರಿಯಾಗಿದ್ದರೆ ಅವರಲ್ಲಿ ಡ್ರಗ್ಸ್ ಸೇವಿಸುವವರು ಸಾಯುತ್ತಾರೆಂದು ಅವರಿಗೆ ತಿಳಿಯಪಡಿಸಿ” ಎಂದು ಡ್ರಗ್ಸ್ ವ್ಯಸನಿಗಳ ಬಗ್ಗೆ  ಪೊಲೀಸ್ ಅಧಿಕಾರಿಗಳ ಸಭೆಯೊಂದರಲ್ಲಿ ಮಾತನಾಡುತ್ತಾ ರೊಡ್ರಿಗೊ ಹೇಳಿದರು.

“ನೀವು ಪೊಲೀಸರನ್ನು ದೂಷಿಸುತ್ತಿದ್ದೀರಿ, ನನ್ನನ್ನೂ ದೂರುತ್ತಿದ್ದೀರಿ. ಏತಕ್ಕಾಗಿ ? ನಿಮ್ಮಲ್ಲಿ ಹಣವಿದೆ. ನಿಮಗೆಲ್ಲಾ  ಹುಚ್ಚು… ನಾವು ನಿಮ್ಮಲ್ಲಿ ತಪ್ಪೊಪ್ಪಿಗೆ ನೀಡುತ್ತಿದ್ದಾಗ ನಮ್ಮನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು. ಅವರು ನಮ್ಮನ್ನು ಮುಟ್ಟುತ್ತಿದ್ದರು.  ನಿಮ್ಮ ನೈತಿಕತೆಯೇನು ? ಧರ್ಮವೇನು ? ಅದರ ಅರ್ಥವೇನು ?” ಎಂದು ಪ್ರಶ್ನಿಸಿ ಪಾದ್ರಿಗಳನ್ನು  ಅಂತಿಮ ಹೋರಾಟಕ್ಕೆ ಸಿದ್ಧರಾಗುವಂತೆ ಸವಾಲು ಹಾಕಿದರು.

ಡ್ರಗ್ಸ್ ವಿರುದ್ಧದ ಸಮರವನ್ನು ಅಧ್ಯಕ್ಷರು ನಿಭಾಯಿಸಿದ ರೀತಿ ಹಾಗೂ ಕಾನೂನುಬಾಹಿರವಾಗಿ ಹಲವಾರು ಮಂದಿಯನ್ನು ಕೊಂದಿರುವ  ಕ್ರಮಗಳನ್ನು ಪಾದ್ರಿಗಳು ಟೀಕಿಸಿದ್ದರು. ಸರಕಾರದ ಡ್ರಗ್ಸ್ ವಿರುದ್ಧದ ಸಮರದಲ್ಲಿ 7042ರಷ್ಟು ಮಂದಿಯನ್ನು ಸಾಯಿಸಲಾಗಿದೆಯೆಂದು ಹೇಳಲಾಗಿದೆಯಾದರೂ ಇಂತಹ ಕಠಿಣ ಕ್ರಮ ಈ ಸಮಸ್ಯೆಗೆ ಪರಿಹಾರದ ನಿಟ್ಟಿನಲ್ಲಿ ಅಗತ್ಯವಿದೆಯೆಂದು ಅಧ್ಯಕ್ಷ ರೊಡ್ರಿಗೊ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಮರಣದಂಡನೆ ಶಿಕ್ಷೆಯನ್ನು ಮತ್ತೆ ಚಾಲ್ತಿಗೊಳಿಸುವ ಸರಕಾರದ ನಿರ್ಧಾರವನ್ನೂ ಪಾದ್ರಿಗಳು ವಿರೋಧಿಸಿದ್ದರೆ ಅತ್ತ ರೊಡ್ರಿಗೊ ಹೊಸ ಆರೋಪ ಹೊರಿಸಿ  ಪಾದ್ರಿಗಳು ಕ್ಯಾಥೋಲಿಕ್ ನಿಯಮಗಳಿಗೆ ವಿರುದ್ಧವಾಗಿ ಪತ್ನಿಯರನ್ನು ಹೊಂದಿದ್ದಾರೆ ಹಾಗೂ ಸಲಿಂಗಕಾಮಿಗಳಾಗಿದ್ದಾರೆಂದು ಆರೋಪಿಸಿದ್ದಾರೆ. ಪಾದ್ರಿಗಳು ಸರಕಾರಿ ನಿಧಿಯನ್ನು ದುರುಪಯೋಗ ಪಡಿಸುತ್ತಿದ್ದು  ಸಾರ್ವಜನಿಕರು ನೀಡಿದ ದೇಣಿಗೆಗಳ ಬಗ್ಗೆಯೂ ಮಾಹಿತಿ ನೀಡಲು ವಿಫಲರಾಗಿದ್ದಾರೆಂದು  ರೊಡ್ರಿಗೊ ಮತ್ತೊಂದು ಆರೋಪ ಹೊರಿಸಿದ್ದಾರೆ.

“ನೀವು ನನ್ನನ್ನು ಎಕ್ಸಪೋಸ್ ಮಾಡುತ್ತಿದ್ದೀರಿ.  ಸರಿ. ನಾನು ನಿಮ್ಮನ್ನು ಹಾಗೆಯೇ ಬಿಡುವುದಿಲ್ಲ. ನಿಮ್ಮ ಹಗರಣಗಳನ್ನೂ ಬಯಲುಗೊಳಿಸಿದ್ದೇನೆ. ನೀವು ತಪ್ಪು ಮಾಡಿದರೂ ಅದು ಚಿಂತೆಯಿಲ್ಲ. ಆದರೆ ನಾವು ಮಾತ್ರ ತಪ್ಪು ಮಾಡಬಾರದೇನು ?” ಎಂದು ಅವರು ಪ್ರಶ್ನಿಸಿದ್ದಾರೆ. “ನಿಮ್ಮ ಸೆಮಿನರಿಗಳಲ್ಲಿ  ನಡೆಯುತ್ತಿರುವ ಸಲಿಂಗರತಿಯ ಬಗ್ಗೆ ಏನನ್ನುತ್ತೀರಿ ? ಅಲ್ಲಿ ಮಕ್ಕಳಿಗೆ ನೀವು ಏನು ಮಾಡಿದ್ದೀರಿ ? ನೀವು ನಿಮ್ಮನ್ನು ತಿದ್ದಿಕೊಳ್ಳದೇ ಇದ್ದರೆ, ಹಿಂದೆ ನೀವು ಲೈಂಗಿಕ ಹಿಂಸೆ ನೀಡಿದ ಸಣ್ಣ ಹುಡುಗರಿಗೆ ನ್ಯಾಯ ಒದಗಿಸಲು ನಿಮ್ಮಿಂದ ಅಸಾಧ್ಯವಾದರೆ ಬದುಕಿನ ಪಾವಿತ್ರ್ಯತೆಯ ಬಗ್ಗೆ ಭಾಷಣ ಬಿಗಿಯಲು ನಿಮಗೆ ಯಾವ ನೈತಿಕ ಹಕ್ಕೂ ಇಲ್ಲ” ಎಂದು ರೊಡ್ರಿಗೊ ಹೇಳಿದ್ದಾರೆ.

ದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗೆಗಿನ ವಾಸ್ತವವನ್ನು ಎದುರಿಸಲು ಪಾದ್ರಿಗಳು ವಿಫಲರಾಗಿದ್ದಾರೆಂದು ಈ ಹಿಂದೆ ಕೂಡ ಫಿಲಿಪ್ಪೀನ್ಸ್ ಅಧ್ಯಕ್ಷರು ಆರೋಪಿಸಿದ್ದರು.

“ದೇವರು ಮಾತ್ರ ಕೊಲ್ಲಲು ಸಾಧ್ಯ ಎಂದು ಪ್ರತಿಯೊಬ್ಬ ಅಧ್ಯಕ್ಷರು ಹೇಳಿದ್ದಾರೆ. ದೇವರಿಲ್ಲದೇ ಇದ್ದರೆ  ಎಂಬ ಪ್ರಶ್ನೆಯನ್ನು ನಾನು ನಿಮಗೆ ಕೇಳ ಬಯಸುತ್ತೇನೆ. ಹಾಗಿದ್ದರೆ ನಾವು ಅಪರಾಧಿಗಳನ್ನು ಹಾಗೆಯೇ ಬಿಟ್ಟು ಬಿಡಬೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ತಾವು ದೇವರನ್ನು ನಂಬುವುದಾಗಿ ಆಧರೆ ಸಂಘಟಿತ ಧರ್ಮವನ್ನು  ಬೆಂಬಲಿಸುವುದಿಲ್ಲವೆಂದು ಫಿಲಿಪ್ಪೀನ್ಸ್ ಅಧ್ಯಕ್ಷರು ಸ್ಪಷ್ಟ ಪಡಿಸಿದ್ದಾರೆ.