ಇಸ್ಲಾಮಿಕ್ ಉಗ್ರರಿಂದ ತಪ್ಪಿಸಿಕೊಳ್ಳಲು `ಹಿಜಬ್ ಧರಿಸಿರುವ ಫಿಲಿಪ್ಪೀನ್ಸ್ ಕ್ರೈಸ್ತರು

ಮನಿಲಾ : ಮರವಿ ಎಂಬ ಪಟ್ಟಣದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸುಮಾರು 1500 ಮಂದಿಯನ್ನು ದಿಗ್ಭಂಧನದಲ್ಲಿರಿಸಿದ ಘಟನೆಯ ನಂತರ ದೇಶದ ಕ್ರೈಸ್ತ ಸಮುದಾಯಕ್ಕೆ ಸೇರಿದ ಜನರು ಉಗ್ರರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಜಬ್ ಎರವಲು ಪಡೆದು ಧರಿಸುತ್ತಿದ್ದಾರೆ. ಘಟನೆ ನಡೆದು ಮೂರು ವಾರಗಳಾಗಿದ್ದು, ಇದೀಗ ಉಗ್ರರ ಕೈಗೆ ಸಿಲುಕಿ ನಲುಗಿರುವ ಹಲವರು ಹೊಟ್ಟೆಗೆ ಆಹಾರವಿಲ್ಲದೆ ತಮ್ಮ ಕಂಬಳಿಗಳನ್ನೇ ತಿನ್ನುತ್ತಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಅವರನ್ನು ಬೆಂಬಲಿಸುತ್ತಿರುವ ಕೆಲ ಸ್ಥಳೀಯ ಸಂಘಟನೆಗಳು ಈ ಮುಸ್ಲಿಂ ಬಾಹುಳ್ಯದ ಪಟ್ಟಣದಲ್ಲಿರುವ ಕ್ರೈಸ್ತರನ್ನು ಗುರುತಿಸಿ, ಹಲವರನ್ನು ಕೊಂದು, ಇನ್ನಿತರರನ್ನು ಅಪಹರಿಸಿದಂದಿನಿಂದ ಅಲ್ಲಿನ ಸುಮಾರು 2 ಲಕ್ಷದಷ್ಟು ಜನರು ಊರು ಬಿಟ್ಟು ಪರಾರಿಯಾಗಿದ್ದಾರೆ. ದೇಶದ ಮಿಲಿಟರಿ ಮೂಲಗಳ ಪ್ರಕಾರ ಸುಮಾರು 300ರಿಂದ 600 ಮಂದಿ ನಾಗರಿಕರು ಇನ್ನೂ ಉಗ್ರರ ಸೆರೆಯಲ್ಲಿದ್ದು. ಅವರನ್ನು ಮಾನವ ಗುರಾಣಿಗಳಾಗಿ ಉಗ್ರರು ಉಪಯೋಗಿಸುತ್ತಿದ್ದಾರೆಂದು ಶಂಕಿಸಲಾಗಿದೆ.