ತ್ಯಾಜ್ಯ ನೀರಿನ ಆಗರವಾಗುತ್ತಿದೆ ಪಲ್ಗುಣಿ ನದಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ನಿವಾಸಿಗಳಿಗೆ ದೈನಂದಿನ ಜೀವನಕ್ಕೆ ನೀರು ಪೂರೈಸುತ್ತಿರುವ ನದಿಗಳು ದಿನಗಳೆದಂತೆ ತ್ಯಾಜ್ಯ ನೀರು ಹರಿಯುವ ತೋಡುಗಳಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ನಿಲ್ಲುವ ಸರದಿ ಇದೀಗ ಗುರುಪುರದ ಪಲ್ಗುಣಿ ನದಿಯದು. ಹೌದು, ಪಲ್ಗುಣಿ ನದಿ ನೀರು ದಿನಹೋದಂತೆ ಕಪ್ಪು ವರ್ಣಕ್ಕೆ ಬದಲಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಪಲ್ಗುಣಿ ನದಿ ತ್ಯಾಜ್ಯ ನೀರಿನ ನದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪಲ್ಗುಣಿ ನದಿಗೆ ಮರವೂರಿನಲ್ಲಿ ಕಟ್ಟಲಾಗಿರುವ ಅಣೆಕಟ್ಟು ಬಳಿ ನೀರು ಕಡು ಬಣ್ಣಕ್ಕೆ ತಿರುಗಿದೆ. ಅಣೆಕಟ್ಟು ಕಂಬಗಳು ಕಪ್ಪಗಾಗಿವೆ. ತಳಮಟ್ಟದಲ್ಲಿ ಕಲ್ಮಶಗಳು ತುಂಬಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ನದಿ ತಳಮಟ್ಟದ ನೀರು ಅದೇ ರೀತಿ ಅಣೆಕಟ್ಟಿನ ಗೋಡೆಗಳು ಕೆಂಜಾರು, ಥೋಕೂರು ಮತ್ತು ಕೂಳೂರಿನಲ್ಲಿ ಪಕ್ಕಗಾಗಿರುವುದು ಕಂಡುಬರುತ್ತದೆ.

“ಸುತ್ತಮುತ್ತಲಿನ ಕೈಗಾರಿಕೆಗಳು ತ್ಯಾಜ್ಯವನ್ನು ನದಿಗೆ ಬಿಟ್ಟರೆ ಹೀಗೆ ಆಗದೆ ಇರುತ್ತದೆಯೇ” ಎಂದು ಸ್ಥಳೀಯರು ಪ್ರಶ್ನಿಸಿದ್ದು, “ಪಲ್ಗುಣಿ ನದಿಗೆ ನಗರದ ಹಲವು ಭಾಗಗಳಲ್ಲಿ ತ್ಯಾಜ್ಯ ನೀರನ್ನು ಬಿಡುತ್ತಿದ್ದಾರೆ, ಇದರಿಂದ ಪಲ್ಗುಣಿ ನದಿ ಕಲುಷಿತಗೊಂಡಿದೆ” ಎಂದು ಬೋಳೂರಿನ ನಿವಾಸಿ ಮೀನುಗಾರರ ಮುಖಂಡ ವಾಸುದೇವ ಬೋಳೂರು ಹೇಳಿದ್ದಾರೆ. ಅವರು ಇತ್ತೀಚೆಗೆ ಈ ವಿಚಾರವನ್ನು ಮೇಯರ್ ಗಮನಕ್ಕೆ ತಂದಿದ್ದಾರೆ.

“ಹೀಗೆ ಮುಂದುವರಿದರೆ ಇದರಿಂದ ಪರಿಸರಕ್ಕೆ ತುಂಬಾ ಅಪಾಯ. ಅದೇ ರೀತಿ ಜಲಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ವಾಸುದೇವ ಹೇಳಿದ್ದಾರೆ.

ಕೈಗಾರಿಕಾ ತ್ಯಾಜ್ಯ

ಪಲ್ಗುಣಿ ನದಿ ತಟದಲ್ಲಿ ಅಷ್ಟು ದೊಡ್ಡ ಕೈಗಾರಿಗಳು ಇಲ್ಲವಾದರೂ ಕುಡುಂಬೂರು ತೋಡು ಬೈಕಂಪಾಡಿ ಕೈಗಾರಿಕಾ ವಲಯದ ಮೂಲಕ ಹಾದು ಹೋಗುವಾಗ ತ್ಯಾಜ್ಯಗಳನ್ನು ಹೊತ್ತೊಯ್ದು ಪಲ್ಗುಣಿ ನದಿಗೆ ಸುರಿಯುತ್ತಿದೆ ಎಂದು ಭಾವಿಸಲಾಗಿದೆ. ಆದರೆ ಅಂತಹ ಸಾಧ್ಯತೆಗಳು ಬಹಳ ಕಡಿಮೆ ಎಂದು ಸಣ್ಣ ಕೈಗಾರಿಕಾ ಸಂಘದ ಗೌರವ್ ಹೆಗ್ಡೆ ಹೇಳಿದ್ದಾರೆ. ಏಕೆಂದರೆ ಬೈಕಂಪಾಡಿ ಕೈಗಾರಿಕಾ ವಲಯದ ತ್ಯಾಜ್ಯ ನೀರು ಬಗ್ಗುಂಡಿ ಕೆರೆಗೆ ಹೋಗುತ್ತದೆ. ಈ ಕೆರೆ ನೀರು ಕುಡುಂಬೂರು ತೋಡಿಗೆ ಹರಿಯುವುದಿಲ್ಲ. ಹಾಗಾಗಿ ಬೈಕಂಪಾಡಿ ಕೈಗಾರಿಕೆಗಳ ತ್ಯಾಜ್ಯ ನೀರು ಪಲ್ಗುಣಿ ನದಿ ನೀರು ಸೇರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.