ಫಲ್ಗುಣಿ ನೀರು ಕಲುಷಿತ : ಜಿಲ್ಲಾಡಳಿತಕ್ಕೆ 24 ಗಂಟೆ ಗಡುವು ನೀಡಿದ ಎನ್ನಿಸಿಎಫ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಫಲ್ಗುಣಿ ನದಿ ನೀರು ಕೈಗಾರಿಕೆಗಳ ರಾಸಾಯನಿಕದಿಂದ ಕಲುಷಿತವಾಗಿದ್ದು, ವಿಷಪೂರಿತ ನೀರು ಕುಡಿದು ಜಲಚರಗಳು ಸಾವನ್ನಪ್ಪಿದೆ. ಪರಿಸರ ದುರ್ನಾತ ಬೀರುತ್ತಿದೆ. ಜನತೆ ಒಂದು ಕ್ಷಣ ಇಲ್ಲಿರಲಾರದಷ್ಟು ಕೆಟ್ಟ ವಾಸನೆ ಹೊಡೆಯುತ್ತಿದೆ. ಜಿಲ್ಲಾಡಳಿತ ಮುಂದಿನ 24 ಗಂಟೆಯೊಳಗಾಗಿ ಏನಾದರೂ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಟೆಂಟ್ ಹಾಕಿ ವಾಸ ಮಾಡುವುದಾಗಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ನಿಸಿಎಫ್) ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಹೇಳಿದ್ದಾರೆ.

ಅವರು ಮಾಧ್ಯಮದವರ ಜೊತೆ ಇತ್ತೀಚೆಗಷ್ಟೇ ನಿರ್ಮಾಣಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣೆಕಟ್ಟಿಗೆ ಭೇಟಿ ನೀಡಿ ಬಳಿಕ ಪ್ರತಿಕ್ರಿಯೆ ನೀಡಿದರು. “2 ವಾರಗಳಿಂದ ಕೆಂಜಾರು, ಮರವೂರು ಮತ್ತು ಇಲ್ಲಿನ ಪರಿಸರದ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದೆಡೆ ಉಪ್ಪುನೀರಿನ ಸಮಸ್ಯೆಯಾದರೆ, ಇನ್ನೊಂದೆಡೆ ದುರ್ನಾತದಿಂದ ವಾಸಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕು” ಎಂದು ಒತ್ತಾಯಿಸಿದರು.