ಕಮಿಷನರ್ ಕಚೇರಿಗೆ ಮುತ್ತಿಗೆ ; ಪಿ ಎಫ್ ಐ ಸದಸ್ಯರಿಗೆ ಲಾಠಿ

ಮಂಗಳೂರು :  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಿನ್ನೆ ನಗರದಲ್ಲಿ ನಡೆದಿದೆ.

1000ಕ್ಕೂ ಮಿಕ್ಕಿದ ಕಾರ್ಯಕರ್ತರು ಮುಂಜಾನೆ ನಗರದ ಆರ್‍ಟಿಒ ಕಚೇರಿ ಬಳಿ ಅನುಮತಿಯಿಲ್ಲದಿದ್ದರೂ ಸಭೆ ಸೇರಿ ಬಳಿಕ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗದಲ್ಲಿ ತೆರಳಿ ಏಕಾಏಕಿಯಾಗಿ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ.

ಈ ವೇಳೆ ಕೆಲವು ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ಹೊಡೆದಿದ್ದಾರೆ ಎನ್ನಲಾಗಿದ್ದು, ಪೊಲೀಸರು ಅವರನ್ನು  ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸುವುದು ಅನಿವಾರ್ಯವಾಗಿದೆ. ಕಲ್ಲೆಸೆತದಲ್ಲಿ ಇಬ್ಬರು ಎಸಿಪಿಗಳು ಮತ್ತು ಒಬ್ಬ ಇನಸ್ಪೆಕ್ಟರ್ ಕೂಡ ಗಾಯಗೊಂಡರು.

ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯತ್ನಿಸಿ, ಅವರು ಕೇಳದೇ ಇದ್ದಾಗ ಬಲವಂತವಾಗಿ ಹಿಡಿದು ಬಂಧಿಸಲು ಯತ್ನಿಸಿದ್ದಾರೆ. ಆಗಲೂ ಕೇಳದೇ ಇದ್ದಾಗ ಲಾಠಿ ಚಾರ್ಜ್ ನಡೆಸಿದ್ದಾರೆ.

ಅಲ್ಲಲ್ಲಿ ಚಪ್ಪಲಿಗಳು, ಶೂಗಳು ಅನಾಥವಾಗಿ ಬಿದ್ದುಕೊಂಡಿದ್ದವು.

ಬಳಿಕ ಪೊಲೀಸರು ಸುಮಾರು 100 ಕಾರ್ಯಕರ್ತರನ್ನು ಬಂಧಿಸಿ ಉರ್ವ ಠಾಣೆಗೆ ಕರೆದೊಯ್ದಿದ್ದಾರೆ. ಗಲಭೆ ವೇಳೆ 7 ಮಂದಿ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.