ತೊಕ್ಕೊಟ್ಟು ರಸ್ತೆ ಪಕ್ಕದಲ್ಲಿದ್ದ ಗೂಡಂಗಡಿಗಳ ತೆರವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಾರ್ವಜನಿಕರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಮತ್ತು ಪೌರಾಯುಕ್ತರ ಆದೇಶದ ಮೇರೆಗೆ ಉಳ್ಳಾಲ ನಗರಸಭಾ ವತಿಯಿಂದ ತೊಕ್ಕೊಟ್ಟು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಶನಿವಾರದಂದು ಏಕಾಏಕಿ ಕಾರ್ಯಾಚರಣೆ ಮಾಡುವ ಮೂಲಕ ತೆರವುಗೊಳಿಸಲಾಯಿತು.

ಇಲ್ಲಿನ ಗೂಡಂಗಡಿಗಳ ಬಗ್ಗೆ ನಮಗೆ ವ್ಯಾಪಕ ದೂರು ಬಂದ ಮೇರೆಗೆ ಕಾರ್ಯಾಚರಣೆ ಮಾಡಿದ್ದೇವೆ. ಸ್ವಚ್ಛ ತೊಕ್ಕೊಟ್ಟಿನ ಪರಿಕಲ್ಪನೆಗೆ ಉಳ್ಳಾಲ ನಗರಸಭೆಯೊಂದಿಗೆ ಎಲ್ಲಾ ಸಾರ್ವಜನಿಕರು, ಅಂಗಡಿ ಮಾಲಕರು ಕೈಜೋಡಿಸಬೇಕು ಎಂದು ಉಳ್ಳಾಲ ನಗರಸಭೆ ಆಯುಕ್ತೆ ವಾಣಿ ಆಳ್ವ ತಿಳಿಸಿದ್ದಾರೆ.

ಸೀಯಾಳದ ಗೆರಟೆಯಲ್ಲಿ ಮಳೆ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಆರೋಗ್ಯ ಇಲಾಖೆ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ನೊಟೀಸ್ ಕೂಡಾ ಜಾರಿ ಮಾಡಲಾಗಿತ್ತು. ಹೀಗಿದ್ದರೂ ನಗರಸಭೆಯ ಎಚ್ಚರಿಕೆಯನ್ನು ಧಿಕ್ಕರಿಸಿದ ಹಿನ್ನೆಲೆಯಲ್ಲಿ ಇಂತಹ ಗೂಡಂಗಡಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಯಿತು ಎಂದು ಉಳ್ಳಾಲ ನಗರಸಭೆ ಆರೋಗ್ಯ ನಿರೀಕ್ಷಕ ರಾಜೇಶ್ ತಿಳಿಸಿದ್ದಾರೆ.

 ವಾಟ್ಸಪ್ಪಿನಲ್ಲಿ ಆಕ್ರೋಶ

ಇದೇ ವೇಳೆ ಕೆಲವು ಗೂಡಂಗಡಿಗಳ ಮಾಲಕರು ನಗರಸಭೆಯ ಕಾರ್ಯವನ್ನು ಖಂಡಿಸಿದ್ದಾರೆ. “ನಗರಸಭೆ ಆಯುಕ್ತರಿಗೆ ಕೇವಲ ಅಮಾಯಕ ಮಂದಿಯ ಗೂಡಂಗಡಿ ಮಾತ್ರ ಕಾಣುತ್ತಿದೆ. ಚೆಂಬುಗುಡ್ಡೆ ಬಳಿ ಮೀನಿನ ವ್ಯಾಪಾರಿಗಳು ಮಾರ್ಗದ ಪಕ್ಕದಲ್ಲೇ ಹಲವು ವರ್ಷಗಳಿಂದ ಮೀನು ವ್ಯಾಪಾರ ಮಾಡುತ್ತಾ ಪರಿಸರದಲ್ಲಿ ಮೀನಿನ ತ್ಯಾಜ್ಯ ಹಾಕಿ ಗಲೀಜು ಮಾಡುತ್ತಿದ್ದಾರೆ. ಆದರೆ ಅವರು ನಗರಸಭೆಯ ವ್ಯಾಪ್ತಿಯಲ್ಲಿ ಇಲ್ಲವೇ. ನಗರಸಭೆ ಕಾರ್ಯಾಚರಣೆ ಕೇವಲ ತೊಕ್ಕೊಟ್ಟಿನ ಗೂಡಂಗಡಿಗಳಿಗೆ ಮಾತ್ರವೇ” ಎಂದು ಪ್ರಶ್ನಿಸಿದ ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ.