ಏರುತ್ತಲೇ ಇರುವ ಪೆಟ್ರೋಲ್ ಬೆಲೆ

ಜನಸಾಮಾನ್ಯರು ಮತ್ತು ಮಧ್ಯಮ ವರ್ಗಗಳ ನಿತ್ಯಜೀವನದಲ್ಲಿ ಅಗತ್ಯ ವಸ್ತುಗಳಲ್ಲಿ ಒಂದಾದ ಪೆಟ್ರೋಲ್, ಡೀಸೆಲ್ ಮತ್ತು ಇತರ ತೈಲಗಳ ಬೆಲೆಗಳು ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಸತತವಾಗಿ ಏರುತ್ತಲೇ ಇದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿತ್ಯ ಪರಿಷ್ಕರಿಸುವ ಹೊಸ ನೀತಿ ಜಾರಿಯಾದ ನಂತರ ಬೆಲೆಗಳು ಏರುತ್ತಲೇ ಇದ್ದು, ಜನಸಾಮಾನ್ಯರ ಅವರಿಗೂ ಬಾರದಂತಾಗಿದೆ. ತೈಲ ಬೆಲೆಗಳ ಹೆಚ್ಚಳಕ್ಕೆ ಸರ್ಕಾರ ವಿಧಿಸುವ ತೆರಿಗೆ ಪ್ರಮಾಣವೇ ಮೂಲ ಕಾರಣವಾಗಿದೆ. ಮೋದಿ ಅಡಳಿತದ ಮೂರು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಶುಲ್ಕ ಶೇ 9.48ರಿಂದ ಶೇ 21.48ಕ್ಕೆ  ಏರಿದೆ. ಮತ್ತೊಂದೆಡೆ ಡೀಸೆಲ್ ಮೇಲಿನ ಅಬಕಾರಿ ಶುಲ್ಕ ಶೇ 3.56ರಿಂದ ಶೇ 17.33ಕ್ಕೆ, ಅಂದರೆ ನಾಲ್ಕು ಪಟ್ಟು ಹೆಚ್ಚಾಗಿದೆ.

ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಶೇ 25ರಷ್ಟಿದ್ದು ಮುಂಬಯಿಯಲ್ಲಿ ಗರಿಷ್ಟ ಶೇ 48.98ರಷ್ಟಿದೆ. ಡೀಸೆಲ್ ಮೇಲಿನ ವ್ಯಾಟ್ ದರ 15 ರಾಜ್ಯಗಳಲ್ಲಿ ಶೇ 20ಕ್ಕಿಂತಲೂ ಹೆಚ್ಚಾಗಿದ್ದು, ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಶೇ 31.06ರಷ್ಟಿದೆ. 2013-14ರಿಂದ 2016-17ರ ಮೂರು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾಗುವ ಅಬಕಾರಿ ಶುಲ್ಕದ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಗೆ ವ್ಯಾಟಿನಿಂದ ಬರುವ ಆದಾಯ ಕೊಂಚ ಮಟ್ಟಿಗೆ ಮಾತ್ರವೇ ಹೆಚ್ಚಾಗಿದೆ. ಡೀಸೆಲಿನ ಚಿಲ್ಲರೆ ಮಾರಾಟ ಬೆಲೆಯಲ್ಲಿ ಶೇ 44.6ರಷ್ಟು ತೆರಿಗೆ ಇದ್ದರೆ ಪೆಟ್ರೋಲ್ ಬೆಲೆಯಲ್ಲಿ ಶೇ 51.6ರಷ್ಟು ತೆರಿಗೆ ಇರುತ್ತದೆ.