ನಾಡಿದ್ದು ಪೆಟ್ರೋಲ್ ಬಂಕ್ ಬಂದ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್‍ನ ಕರೆ ಮೇರೆಗೆ ಅಕ್ಟೋಬರ್ 13ರಂದು ರಾಷ್ಟ್ರವ್ಯಾಪಿ ಪೆಟ್ರೋಲಿಯಂ ವರ್ತಕರ ಮುಷ್ಕರಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ  ಪೆಟ್ರೋಲಿಯಂ ವರ್ತಕರ ಸಂಘ ಸಂಪೂರ್ಣ ಬೆಂಬಲ ನೀಡಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಲ್ಲಾ ಪೆಟ್ರೋಲ್ ಬಂಕುಗಳು ಅಂದು ಮುಷ್ಕರ ಹೂಡಲಿವೆ. ಅಕ್ಟೋಬರ್ 12ರ ಮಧ್ಯರಾತ್ರಿ 12ರಿಂದ ಅಕ್ಟೋಬರ್ 13ರ ಮಧ್ಯರಾತ್ರಿ 12 ಗಂಟೆಯವರೆಗೆ ಯಾವುದೇ ಪೆಟ್ರೋಲ್ ಬಂಕ್‍ಗಳಲ್ಲಿ ಡೀಸೆಲ್, ಪೆಟ್ರೋಲ್ ಮಾರಾಟ ಇರುವುದಿಲ್ಲ.

ಪೆಟ್ರೋಲಿಯಂ ವರ್ತಕರ ಬೇಡಿಕೆ ಈಡೇರದೇ ಇದ್ದಲ್ಲಿ ಅಕ್ಟೋಬರ್ 27ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ವರ್ತಕರ ಸಂಘದ ಅಧ್ಯಕ್ಷ ಸತೀಶ್ ಎನ್ ಕಾಮತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.