ಮೂಡಬಿದಿರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ

ಇಂದು ಸುಪ್ರೀಂ ಕೋರ್ಟಿಗೆ ದಾಖಲೆ ಸಲ್ಲಿಸಲಿರುವ ಪ್ರಾಣಿ ದಯಾ ಸಂಸ್ಥೆ

ಪೆಟಾ ಮತ್ತೆ ತಕರಾರು

ನಮ್ಮ ಪ್ರತಿನಿಧಿ ವರದಿ

 ಮಂಗಳೂರು : ಮೂಡಬಿದಿರೆಯಲ್ಲಿ ಶನಿವಾರ ಭಾರೀ ಜನಸಾಗರದ ಉಪಸ್ಥಿತಿಯಲ್ಲಿ ನಡೆದ ಈ ಋತುವಿನ ಪ್ರಥಮ ಕಂಬಳ – ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಭಾಗವಹಿಸಿದ ಕೋಣಗಳನ್ನು ಹಿಂಸಿಸಲಾಗಿದೆ ಎಂದು ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಮತ್ತೆ ತಕರಾರು ಎತ್ತಿದೆ. ಈ ಬಗೆಗಿನ ವೀಡಿಯೋ ಹಾಗೂ ಫೋಟೋ ದಾಖಲೆಗಳನ್ನು ಪೆಟಾ ಸೋಮವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಲಿದೆ ಎಂದು ಪೆಟಾ ಸಿಇಒ ಮಣಿಲಾಲ್ ವಲ್ಲಿಯತೆ ಹೇಳಿದ್ದಾರೆ.

“ಕಂಬಳದಲ್ಲಿ ಭಾಗವಹಿಸಿದ ಹೆಚ್ಚಿನ ಕೋಣಗಳನ್ನು ಬಲವಂತದಿಂದ ಸ್ಪರ್ಧೆಗಿಳಿಸಲಾಗಿದೆ. ಪ್ರಾಣಿಗಳಿಗೆ  ಹೊಡೆಯಲಾಗಿದೆ, ಕೋಲುಗಳಿಂದ ತಿವಿಯಲಾಗಿದೆ ಹಾಗೂ ಅವುಗಳ ಬಾಲಗಳನ್ನು ಎಳೆಯಲಾಗಿದೆ. ಕೆಲ ಕೋಣಗಳ ಮೈ ಮೇಲೆ ಗಾಯದ ಗುರುತುಗಳೂ ಇವೆ. ಸ್ಪರ್ಧೆಯ ನಂತರ ಕೆಲ ಕೋಣಗಳ ಬಾಯಿಯಲ್ಲಿ ನೊರೆ ಕಾಣಿಸಿಕೊಂಡಿದ್ದರೆ ಇನ್ನು ಕೆಲವು ಬಹಳಷ್ಟು ಜೊಲ್ಲು ಸುರಿಸುತ್ತಿದ್ದುದು ಕಂಡು  ಬಂತು. ಈ ಪ್ರಾಣಿಗಳು ಕಂಬಳಕ್ಕೆ ಹೇಳಿ ಮಾಡಿಸಿದ್ದಲ್ಲವೆಂದು ಇದರಿಂದ ತಿಳಿಯುತ್ತಿದೆ. ಕೆಲವು ಕೋಣಗಳನ್ನು ಎಳೆದು ಸ್ಪರ್ಧಾ ಕಣದಲ್ಲಿ ನಿಲ್ಲಿಸಲಾಗಿತ್ತು ಹಾಗೂ ಕೆಲ ಕೋಣಗಳ ಮೂಗಿನ ಸುತ್ತ 2ರಿಂದ 2.5 ಸೆಮೀ ದಪ್ಪ ಹಗ್ಗಗಳನ್ನು ಕಟ್ಟಿ  ಪ್ರಾಣಿಗಳಿಗೆ ತೀವ್ರ ನೋವುಂಟು ಮಾಡಲಾಗಿತ್ತು. ಕಲ ವೀಕ್ಷಕರು ಬೆಟ್ಟಿಂಗ್ ಕೂಡ ಮಾಡುತ್ತಿದ್ದರು” ಎಂದು ಪೆಟಾ ಹೇಳಿಕೆಯೊಂದರಲ್ಲಿ ದೂರಿದೆ.

ಆರೋಪ ತಿರಸ್ಕರಿಸಿದ  ಕಂಬಳ ಸಮಿತಿ ಪೆಟಾದ ಆರೋಪವನ್ನು ದಕ್ಷಿಣ ಕನ್ನಡ-ಉಡುಪಿ-ಕಾಸರಗೋಡು ಕಂಬಳ ಸಮಿತಿ ನಿರಾಕರಿಸಿದೆ. “ಮೂಡಬಿದಿರೆಯಲ್ಲಿ ಜರುಗಿದ ಕಂಬಳದಲ್ಲಿ ಒಂದೇ ಒಂದು ಹಿಂಸೆ ಅಥವಾ ಕಿರುಕುಳದ ಪ್ರಕರಣದ ನಡೆದಿಲ್ಲ. ಪ್ರಾಣಿಗಳಿಗೆ ಸ್ಪರ್ಧೆ ಆರಂಭದ ಮುನ್ನ ಯಾ ನಂತರ  ಹೊಡೆಯಲಾಗಿಲ್ಲ” ಎಂದು  ಹೇಳಿದ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ್ ಶೆಟ್ಟಿ, ಸ್ಪರ್ಧೆಯ ನಂತರ ಕೋಣಗಳ ಉಸಿರಾಟದ ವೇಗ ಹೆಚ್ಚಾಗುವುದು ಸಾಮಾನ್ಯ ಎಂದರು. ಸೋಮವಾರ ತಮ್ಮ ಸಮಿತಿ ಕೂಡ ಸುಪ್ರೀಂ ಕೋರ್ಟಿನ ಮುಂದೆ ಅಪೀಲು ಸಲ್ಲಿಸಿ ಸಮಿತಿಯನ್ನು ಕೂಡ ಪ್ರಕರಣದ ಭಾಗವನ್ನಾಗಿಸಬೇಕೆಂದು ಕೋರಲಿದೆ ಎಂದರು. ಕೋಣಗಳು ಹಾಗೂ ಎತ್ತುಗಳು ಒಂದೇ  ಎಂದು ಹೇಳುವ ಪೆಟಾ, ಕಂಬಳದ ಬಗ್ಗೆ ಮಾತನಾಡಲು ಅರ್ಹವಲ್ಲ ಎಂದೂ ಅವರು ಹೇಳಿದರು.

`ಪÉಟಾ ಪ್ರಚಾರಕ್ಕಾಗಿ

ವಿರೋಧಿಸುತ್ತಿದೆ’

“ಕಂಬಳವನ್ನು ಪೆಟಾ ಕೇವಲ ಪ್ರಚಾರಕ್ಕಾಗಿ ವಿರೋಧಿಸುತ್ತಿದೆ” ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ಕಂಬಳ ಅಭಿಮಾನಿಗಳಿಗೆ ಈ ಕ್ರೀಡೆಯ ಮೇಲಿರುವ ಪ್ರೀತಿ ಹಾಗೂ ಅಭಿಮಾನವನ್ನು ಪೆಟಾ ಗಮನಿಸಬೇಕು. ಕಸಾಯಿಖಾನೆಗಳಲ್ಲಿ ಪ್ರತಿ ದಿನ ಸಾವಿರಾರು ಪ್ರಾಣಿಗಳನ್ನು ಹೇಗೆ ಕಡಿಯಲಾಗುತ್ತದೆ ಎಂದು ಪೆಟಾ ಸದಸ್ಯರು ನೋಡಬೇಕು. ಕುದುರೆ ರೇಸಿನ ಸಂದರ್ಭ ಕುದುರೆಗಳಿಗೆ ಹೊಡೆಯಲಾಗುವುದಿಲ್ಲವೇ ?” ಎಂದು ಗೌಡ ಪ್ರಶ್ನಿಸಿದ್ದಾರೆ.