ಮಾಲಕಿಯನ್ನು ಆಗಂತುಕನ ದಾಳಿಯಿಂದ ರಕ್ಷಿಸಿ ಚೂರಿ ಇರಿತಕ್ಕೆ ಬಲಿಯಾದ `ಲಕ್ಕಿ’

ಮುಂಬೈ : ಮಹಿಳೆಯೊಬ್ಬಳು ದತ್ತು ಪಡೆದಿದ್ದ ಬೀದಿ ನಾಯಿಯೊಂದು ಮಾಲಕಿ ತನಗೆ ನೀಡಿದ ಪ್ರೀತಿಯನ್ನು ಆಕೆಯ ಪ್ರಾಣವುಳಿಸುವ ಮೂಲಕ ಆಕೆಗೆ ಮರಳಿ ನೀಡಿದೆ. ಆ ಪ್ರೀತಿಯ ನಾಯಿ `ಲಕ್ಕಿ’ ತನ್ನ ಮಾಲಕಿಯನ್ನು ಮುಂಬೈಯ ಆಂಟೊಪ್ ಹಿಲ್ ಪ್ರದೇಶದಲ್ಲಿ ದಾಳಿಕೋರನ ಕೈಯ್ಯಿಂದ ರಕ್ಷಿಸಿದೆ. ಮಹಿಳೆ ಸುಮಿತಿ ದೇವೇಂದ್ರ ಯಾವುದೇ ಗಾಯಗಳಿಲ್ಲದೇ ಪಾರಾದರೂ ಲಕ್ಕಿ ಮಾತ್ರ  ಚೂರಿ ಇರಿತಕ್ಕೊಳಗಾದ ಕೆಲವೇ ನಿಮಿಷಗಳಲ್ಲಿ ಪ್ರಾಣ ಕಳೆದುಕೊಂಡಿದೆ.

ಇಪ್ಪತ್ತಾರು ವರ್ಷದ ಸುಮಿತಿ ತನ್ನ ಪ್ರೀತಿಯ ಲಕ್ಕಿಯ ಅಗಲುವಿಕೆಯಿಂದ ದುಃಖಿತರಾಗಿದ್ದು  ಕಳೆದ ವರ್ಷ ತಮ್ಮ ತಾಯಿ ತೀರಿಕೊಂಡ ನಂತರ ಏಕಾಂಗಿತನವನ್ನು ದೂರಗೊಳಿಸುವ ಸಲುವಾಗಿ ಮನೆ ಸಮೀಪವಿದ್ದ ಈ ಬೀದಿ ನಾಯಿಯನ್ನು ಸಾಕುತ್ತಿದ್ದರು. “ನೆರೆಮನೆಯ ಮಕ್ಕಳು ಈ

ನಾಯಿಯನ್ನು ನನ್ನ ಮನೆ ಬಾಗಿಲಲ್ಲಿ ಬಿಟ್ಟಿದ್ದರು. ಆತ ಒಬ್ಬಂಟಿಯಾಗಿದ್ದ, ನಾನು ಅವನನ್ನು ದತ್ತು ಪಡೆದೆ” ಎಂದು ತಮ್ಮ ಸಹೋದರನೊಂದಿಗೆ ವಾಸಿಸುವ ಸುಮಿತಿ ಹೇಳುತ್ತಾರೆ.

ಎಪ್ರಿಲ್ 9ರ ರಾತ್ರಿ ಮನೆಯ ಹೊರಗೆ ಗದ್ದಲವೇರ್ಪಟ್ಟಿದ್ದು ಸದ್ದು ಕೇಳಿ  ಹೊರಬಂದು ನೋಡಿದಾಗ ನೆರೆಮನೆಯ ವೆಂಕಟೇಶ್ ದೇವೇಂದ್ರ  ತನ್ನ  ಗೆಳತಿ ಜ್ಯೋತಿ ಮತ್ತಾಕೆಯ ಸಹೋದರಿ ರೋಸಿಯೊಂದಿಗೆ ಜಗಳ ಮಾಡುತ್ತಿದ್ದ. ಅವರ ಜಗಳ ವಿಕೋಪಕ್ಕೆ ಹೋಗಿ ವೆಂಕಟೇಶ್ ಹತ್ತಿರದಲ್ಲಿಯೇ ಇದ್ದ ತನ್ನ ಮನೆಗೆ ಹೋಗಿ ಚೂರಿಯೊಂದಿಗೆ ಹಿಂದಿರುಗಿದ್ದ. ರೋಸಿ ಓಡಿ ಹೋದರೆ  ಸುಮಿತಿ ಕೂಡ ಮನೆಗೆ ಓಡಿದ್ದರು, ಆದರೆ  ಸುಮಿತಿಯ ಬಳಿ ಚೂರಿಯೊಂದಿಗೆ ವೆಂಕಟೇಶ್ ಬಂದಾಗ ಆಕೆಯ ನಾಯಿ ಆತನನ್ನು ನೋಡಿ ಬೊಗಳಿದ್ದೇ ತಡ ಆತ ಅದಕ್ಕೆ ಇರಿದಿದ್ದ. ವೆಂಕಟೇಶ್ ಸ್ಥಳದಿಂದ ಪರಾರಿಯಾದರೆ ಲಕ್ಕಿ  ತೀವ್ರ ರಕ್ತಸ್ರಾವಕ್ಕೊಳಗಾಗಿ ಮೃತಪಟ್ಟಿತು.

ಪೊಲೀಸರು ವೆಂಕಟೇಶನನ್ನು ಬಂಧಿಸಿದ್ದಾರೆ. ಆದರೆ ಸುಮಿತಿ ಮಾತ್ರ ತಮ್ಮ ನಾಯಿಯ ಅಗಲುವಿಕೆಯ ನೋವನ್ನು ಮರೆತಿಲ್ಲ. “ಆತ ನಮ್ಮ ಪಾಲಿಗೆ ಲಕ್ಕಿಯಾಗಿದ್ದ. ಈಗ ನನ್ನ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡಿದ್ದೇನೆ” ಎಂದು ಆಕೆ ನೋವಿನಿಂದ ನುಡಿಯುತ್ತಾರೆ.

LEAVE A REPLY