ಉಡುಪಿ ಜಿಲ್ಲೆಯಲ್ಲಿ 10 ಎಕ್ರೆಗೂ ಅಧಿಕ ತೆಂಗಿನ ತೋಟಕ್ಕೆ ಗರಿ ತಿನ್ನುವ ಕಪ್ಪು ತಲೆ ಕೀಟ ಬಾಧೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ತೆಂಗಿನ ಗರಿ ತಿನ್ನುವ ಕಪ್ಪು ತಲೆಯ ಕೀಟವು ಉಡುಪಿ ಜಿಲ್ಲೆಯ ಸುಮಾರು 10 ಎಕ್ರೆಗೂ ಅಧಿಕ ತೆಂಗಿನ ತೋಟಕ್ಕೆ ಬಾಧಿಸಿದೆ ಎಂಬುದು ತೋಟಗಾರಿಕಾ ಇಲಾಖೆಯು ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಸಂಬಂಧಪಟ್ಟ ಏಜೆನ್ಸಿಗಳು ಕಾರ್ಯಪ್ರವೃತ್ತರಾಗಿದ್ದು, ಜಾಗೃತಿ ಅಭಿಯಾನವನ್ನು ಜಾರಿಗೊಳಿಸಿದೆ.

ಒಪಿಸಿನಿಯಾ ಅರೆನೊಸೆಲ್ಲಾ ಎಂಬ ಹೆಸರಿನ ಈ ಕಪ್ಪು ತಲೆಯ ಕೀಟ ತೆಂಗಿನ ಗರಿಗಳನ್ನು ತಿನ್ನುತ್ತವೆ. ಈ ಕೀಟ ಬಾಧಿತ ತೆಂಗಿನ ಮರಗಳ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ, ಗರಿಗಳು ಒಣಗುತ್ತವೆ. ಕೀಟ ಬಾಧಿತ ತೆಂಗಿನ ಮರಗಳು ಕ್ರಮೇಣ ಸತ್ತು ಬೀಳುತ್ತವೆ ಎಂದು ಉಡುಪಿ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ನಿಧೀಶ್ ಕೆ ಜೆ ಹೇಳಿದ್ದಾರೆ. “ರಾಸಾಯನಿಕ ಸಿಂಪಡಣೆಗಳ ಬಗ್ಗೆ ಒಲವು ಹೊಂದಿಲ್ಲ, ಹಾಗಾಗಿ ಜೈವಿಕ ಮಧ್ಯಪ್ರವೇಶಕ್ಕೆ ವಿನಂತಿಸಿದ್ದೇವೆ” ಎಂದು ಅವರು ಹೇಳಿದರು. “ಈ ಕೀಟವನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ವಹಿಸಲು ಜೈವಿಕ ನಿಯಂತ್ರಣ ವಿಧಾನವೇ ಹೆಚ್ಚು ಪರಿಣಾಮಕಾರಿ, ಹಾಗಾಗಿ ನಾವು ಪ್ಯಾರಾಸೈಟ್ ಬಳಕೆಗೆ ಶಿಫಾರಸು ಮಾಡಿದ್ದೇವೆ. ಈ ಪ್ಯಾರಾಸೈಟನ್ನು ದಕ್ಷಣ ಕನ್ನಡ ಜಿಲ್ಲೆಯ ತುಂಬೆಯ ತೋಟಗಾರಿಕಾ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ” ಎಂದರು.

“ಉಡುಪಿ ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ ಕೀಟ ಬಾಧೆ ಹೊಸತೇನಲ್ಲ. ಜಿಲ್ಲೆಯ ಜನತೆ ಸಮರ್ಪಕವಾಗಿ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿಲ್ಲ, ಜಿಲ್ಲೆಯಲ್ಲಿರುವ 17,952 ಹೆಕ್ಟೇರು ತೆಂಗಿನ ತೋಟದಲ್ಲಿ ಹೆಚ್ಚಿನ ತೆಂಗಿನ ಮರಗಳು ಕೀಟ ಬಾಧೆಗೊಳಗಾಗಿವೆ. ಮಲ್ಪೆಯಲ್ಲಿ ಸುಮಾರು 500ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ” ಎಂದು ನಿಧೀಶ್ ಹೇಳಿದ್ದಾರೆ.