`ಮೀಸಲಾತಿ ಹೆಚ್ಚಿಸಬೇಕೆಂಬುದು ಜನರ ಇಚ್ಛೆ’

ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ನೇರ ನಡೆನುಡಿಯ ಮನುಷ್ಯ. ತಮಗೆ ತೋಚಿದ್ದನ್ನು ಥಟ್ಟನೆ ಹೇಳಿ ಬಿಡುತ್ತಾರೆ. ಮೀಸಲಾತಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅವರು ಈ ಸಂದರ್ಶನದಲ್ಲಿ ನೀಡಿದ್ದಾರೆ.

  • ಶೇ 70ರಷ್ಟು ಮೀಸಲಾತಿ ಪ್ರಸ್ತಾಪದ ಹಿಂದಿನ ಉದ್ದೇಶಗಳೇನೆಂದು ಹೇಳಬಹುದೇ ?

ಮೀಸಲಾತಿಯನ್ನು ಶೇ 50ರಿಂದ ಶೇ 70ಕ್ಕೇರಿಸಬೇಕೆಂಬುದು ಜನರ ಹಲವು ಕಾಲದ ಬೇಡಿಕೆ. ಇದೇ ಕಾರಣದಿಂದ ನಾವು ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ಭರವಸೆ ನೀಡಿದ್ದೇವೆ.


  • ಈ ಘೋಷಣೆಯನ್ನು ಬಿಜೆಪಿ ನಡೆಸಿದ ರ್ಯಾಲಿಯೊಂದರ ನಂತರ ಮಾಡಲಾಗಿತ್ತು. ಬಿಜೆಪಿಯ ಹೆಚ್ಚುತ್ತಿರುವ ಜನಪ್ರಿಯತೆ ನಿಮಗೆ ತಲೆ ನೋವು ತಂದಿದೆಯೇ ?

ಬಿಜೆಪಿ ಜನಪ್ರಿಯಗೊಳ್ಳುತ್ತಿದೆಯೆಂದು ನಿಮಗೆ ಯಾರು ಹೇಳಿದ್ದು ? ಎಲ್ಲರೂ ಮೆಚ್ಚುವಂತಹ ಪಕ್ಷ ಕಾಂಗ್ರೆಸ್ ಆಗಿದೆ. ಬಿಜೆಪಿಗೆ ಹೊಸತೇನನ್ನೂ ನೀಡಲು ಇಲ್ಲ. ಆದರೆ ಕಾಂಗ್ರೆಸ್ ಪಕ್ಷದ ಬಳಿ ಅದರ ಹಲವು ಸಾಧನೆಗಳಿವೆ. ನಾವು 2018ರಲ್ಲಿ ಚುನಾವಣೆಯೆದುರಿಸುವಾಗ  ಇದರ ಬಗ್ಗೆ  ಜನರಿಗೆ ಮನದಟ್ಟು ಮಾಡಲಿದ್ದೇವೆ. ಬಿಜೆಪಿ ಇಂತಹ ರ್ಯಾಲಿಗಳನ್ನು ಏಕೆ ಆಯೋಜಿಸುತ್ತಿದೆ ಎಂದು ನಮಗೆ ತಿಳಿದಿದೆ. ಇಂತಹ ರ್ಯಾಲಿಗಳಲ್ಲಿ ಅದು ಕೇವಲ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತಿದೆಯೇ ಹೊರತು ನಿಜ ಜೀವನದ ಸಮಸ್ಯೆಗಳಿಗೆ ಒತ್ತು ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ನೀತಿಗಳು ಯಾವತ್ತೂ ಬಡವರ ಪರವಾಗಿದೆ.


  • ಮೀಸಲಾತಿ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಯ ಘೋಷಣೆ ದೊಡ್ಡ ಸಮಸ್ಯೆಯೆದುರಿಸಬಹುದು. ಸರಕಾರಕ್ಕೆ ಜಾತಿ ಜನಗಣತಿ ವರದಿ ಇನ್ನಷ್ಟೇ ತಲುಪಬೇಕಿರುವಾಗ ನೀವು ಇಂತಹ ಒಂದು  ಪರಿಹಾರವನ್ನು ಹೇಗೆ ಶಿಫಾರಸು ಮಾಡುತ್ತೀರಿ ?

ನೀವು ಆ ದಿನ ವಿಧಾನ ಪರಿಷತ್ ಅಧಿವೇಶನಕ್ಕೆ ಬಂದಿದ್ದೀರೇನು ? ನಿಮ್ಮ ಕೆಲ ಸಹೋದ್ಯೋಗಿಗಳಾದರೂ ಬಂದಿದ್ದಿರಬಹುದು. ನಾವು ನಮ್ಮ ಮೊದಲ ಉತ್ತರ ನೀಡಿದಾಗ, ಜಾತಿ ಜನಗಣತಿ ವರದಿ  ಹೊರಬಿದ್ದ ನಂತರವೇ ಸರಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳುವುದೆಂಬುದು ಸ್ಪಷ್ಟವಾಗಿತ್ತು. ಆದರೆ ಈ ಉತ್ತರ  ಸದಸ್ಯರಿಗೆ ಸಮಾಧಾನ ತಂದಿರಲಿಲ್ಲ. ಪಕ್ಷಬೇಧ ಮೀರಿ ಎಲ್ಲರೂ ಮುಖ್ಯಮಂತ್ರಿಯನ್ನು ಆಗ್ರಹಿಸಿದ ಪರಿಣಾಮ ಅವರು  ಮೀಸಲಾತಿ ಹೆಚ್ಚಿಸುವ ಭರವಸೆ ನೀಡಿದ್ದಾರೆ.


  • ನಿಮ್ಮ ಸರಕಾರ ಜಾತಿ ಜನಗಣತಿ ನಡೆಸಲು ಆದೇಶ ನೀಡಿದಾಗ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸುವ ಬಗ್ಗೆ ಮಾತನಾಡಿತ್ತು. ನೀವು ಇತರ ಸಮುದಾಯಗಳಿಗೆ ಯಾವ ಪ್ರಯೋಜನ ನೀಡುತ್ತೀರಿ ?

ವರದಿ ಬಿಡುಗಡೆಗೊಳ್ಳುವ ಮುನ್ನವೇ ಇಂತಹ  ತೀರ್ಮಾನಗಳಿಗೆ ನೀವೇಕೆ ಬರುತ್ತೀರಿ ? ನಮ್ಮ ಎಲ್ಲಾ ನೀತಿಗಳನ್ನು ಕಟುವಾಗಿ ಟೀಕಿಸಿರುವ ವಿಪಕ್ಷ ಬಿಜೆಪಿ ಈ ವಿಚಾರದಲ್ಲಿ ನಮ್ಮ ಬೆಂಬಲಕ್ಕೆ ನಿಂತಿರುವುದು ನಮಗೆ ಸಂತಸ ತಂದಿದೆ.


  • ನೀವೇಕೆ ಇಬ್ಬಗೆ ನೀತಿ ಅನುಸರಿಸುತ್ತಿದ್ದೀರಿ ?

ಇಲ್ಲಿ ಇಬ್ಬಗೆ ನೀತಿಯ ವಿಚಾರ ಎಲ್ಲಿ ಬಂತು ?  ಸದಸ್ಯರು ಸರಕಾರದಿಂದ ಸ್ಪಷ್ಟ ಭರವಸೆ ಅಪೇಕ್ಷಿಸಿದ್ದರಿಂದ ಈ ಭರವಸೆ ನೀಡಲಾಗಿತ್ತು. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಅಧಿಕಾರ ಕೇಂದ್ರ ಸರಕಾರಕ್ಕಿರುವುದು ಎಂದು ನಾವು ಸದಸ್ಯರಿಗೆ ಈಗಾಗಲೇ ಮನದಟ್ಟು ಮಾಡಿದ್ದೇವೆ. ಜಾತಿ ಜನಗಣತಿ ವರದಿ ಹೊರಬಿದ್ದ ನಂತರ ನಾವು ಮೀಸಲಾತಿ ಪ್ರಮಾಣ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇವೆ.


  • ಉದ್ಯೋಗ ಮತ್ತು ಶಿಕ್ಷಣ ರಂಗಗಳಲ್ಲಿ ಶೇ 69 ಮೀಸಲಾತಿ ನೀಡುವ ಬಗ್ಗೆ ತಮಿಳುನಾಡು ಸರಕಾರ ಕೈಗೊಂಡ ನಿರ್ಧಾರ ಇನ್ನೂ ಸುಪ್ರೀಂ ಕೋರ್ಟಿನ ಮುಂದಿದೆ. ಆದುದರಿಂದ ನೀವು ಶೇ 70 ಮೀಸಲಾತಿ ಘೋಷಿಸಿದರೂ ಅದು ಕಾನೂನು ತೊಡಕು ಎದುರಿಸಬಹುದಲ್ಲವೇ ?

ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಯಾ ಸೀಟುಗಳಲ್ಲಿ ಮೀಸಲಾತಿ ಹೆಚ್ಚಿಸಲಾಗುವುದೆಂದು ಸರಕಾರ ಎಲ್ಲಿಯೂ ಹೇಳಿಲ್ಲ. ಈಗಿನ ಮೀಸಲಾತಿಯನ್ನು ಶೇ 50ರಿಂದ ಶೇ 70ಕ್ಕೆ ಹೆಚ್ಚಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದೆಂಬ ಭರವಸೆಯನ್ನು ಸರಕಾರ ನೀಡಿದೆ.  ಈಗಿನ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ರಾಜ್ಯ ಸರಕಾರಕ್ಕೆ ಅನುಕೂಲ ಮಾಡಿಕೊಡಲು ಸಂವಿಧಾನಕ್ಕೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರಕಾರ ಯೋಚಿಸಬೇಕಿದೆ. ಹಾಗಾಗದ ಹೊರತು ಏನನ್ನೂ ಮಾಡಲು ಸಾಧ್ಯವಿಲ್ಲ.


  • ಶೇ 70ರಷ್ಟು ಮೀಸಲಾತಿ ಘೋಷಿಸಿದ ನಂತರ ನಿಮ್ಮ ಸರಕಾರಕ್ಕೆ ಜನರಿಗೆ ನೀಡಲು ಬೇರೇನೂ ಕೊಡುಗೆಗಳು ಉಳಿದಿರುವುದಿಲ್ಲ. ಹಾಗಿರುವಾಗ ಮುಂದಿನ ಚುನಾವಣೆಯನ್ನು ನೀವು ಹೇಗೆ ಗೆಲ್ಲುವಿರಿ ?

ಕಾಂಗ್ರೆಸ್ ಪಕ್ಷ ಯಾವುದಾದರೂ ಯೋಜನೆ ಘೋಷಿಸಿದಾಗಲೆಲ್ಲಾ ವಿರೋಧಿಗಳು ಸರಕಾರವನ್ನು ಟೀಕಿಸಿದ್ದಾರೆ ಹಾಗೂ ಸರಕಾರ ಒಂದು ಹಂತಕ್ಕಿಂತ ಮುಂದೆ ಹೋಗಲಿಕ್ಕಿಲ್ಲ ಎಂದು ಹೇಳಿದ್ದಾರೆ. ಆದರೆ ನಮಗೆ ಏನು ಮಾಡಬೇಕೆಂದು ಗೊತ್ತು. ನಾವು ನಮ್ಮ ಭರವಸೆಗಳನ್ನು ಈಡೇರಿಸಲು ವಿಫಲರಾದರೆ ಜನ ನಮಗೆ ಪಾಠ ಕಲಿಸುತ್ತಾರೆ.

 

(ಆಧಾರ :  ಡೆಕ್ಕನ್ ಕ್ರಾನಿಕಲ್)