ಉತ್ಸವಗಳು ಆರಂಭ : ಸುಡುಮದ್ದುಗಳ ಬಳಕೆಯಲ್ಲಿ ಸುರಕ್ಷತೆಗೆ ಆದ್ಯತೆಗೆ ಕರೆ

ಮಂಗಳೂರು : ಜಿಲ್ಲೆಯಾದ್ಯಂತ ಸಾಮಾನ್ಯವಾಗಿ ಎಪ್ರಿಲ್ 1ರಿಂದ ಆರಂಭವಾಗುವ ದೇವಸ್ಥಾನಗಳ ವಾರ್ಷಿಕ ಉತ್ಸವಗಳು ಜುಲೈ 14ರವರೆಗೆ ನಡೆಯುತ್ತವೆ. ಈ ಅದ್ದೂರಿ ಉತ್ಸವಗಳಲ್ಲಿ ಒಂದು ಭಾಗವಾಗಿ ಸೇರ್ಪಡೆಗೊಂಡಿರುವ ಸುಡುಮದ್ದುಗಳೇ ಸುರಕ್ಷತೆಯ ದೃಷ್ಟಿಯಿಂದ ದೊಡ್ಡ ಸವಾಲಾಗಿ ಪರಿಣಮಿಸಿವೆ. ಈ ಸುಡುಮದ್ದುಗಳಿಗೆ ಆಹುತಿಯಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ.

2016ರಲ್ಲಿ ಕೇರಳದ ಕೊಲ್ಲಂ ದೇವಸ್ಥಾನದಲ್ಲಿ ಸಂಭವಿಸಿದ ಅಗ್ನಿ ಅನಾಹುತ, ಈ ವರ್ಷದ ಆರಂಭದಲ್ಲಿ ವಿಟ್ಲದಲ್ಲಿ ಸಂಭವಿಸಿದ ಸುಡುಮದ್ದು ತಯಾರಿಕಾ ಘಟಕದ ಅನಾಹುತ ಪ್ರಕರಣಗಳು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿವೆ.

ಕರಾವಳಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಉತ್ಸವದ ಸಂದರ್ಭ ಸುಡುಮದ್ದುಗಳನ್ನು ಬಳಸಲಾಗುತ್ತಿದೆ. ಈ ಸುಡುಮದ್ದುಗಳನ್ನು ಕೆಲವು ದೇವಸ್ಥಾನಗಳು ಸಾಂಪ್ರದಾಯಿಕ ತಯಾರಕರಿಂದ ಖರೀದಿಸಿದ್ದರೆ, ಇನ್ನು ಕೆಲವು ದೇವಸ್ಥಾನಗಳು ಕಸ್ಟಮ್ ತಯಾರಕರಿಂದ ಖರೀದಿಸುತ್ತಾರೆ.

ಕಸ್ಟಮ್ ಮೇಡ್ ಸುಡುಮದ್ದುಗಳು ಅಪಾಯಕಾರಿ. ಇದರಲ್ಲಿ ರಥ ಉತ್ಸವದ ಸಂದರ್ಭದಲ್ಲಿ ಬಳಸುವ ಕದಿನ ಭಾರೀ ಪ್ರಮಾಣದ ಸ್ಪೋಟಕಗಳನ್ನು ಹೊಂದಿದ್ದು, ದೊಡ್ಡ ಪ್ರಮಾಣದ ಸದ್ದನ್ನು ಮಾಡುತ್ತದೆ. ಇದು ಅತ್ಯಂತ ಅಪಾಯಕಾರಿ. 2006 ರಲ್ಲಿ ಪುತ್ತೂರು ತಾಲೂಕಿನಲ್ಲಿ ಕದಿನ ಸ್ಫೋಟಿಸಿ ನಾಲ್ವರ ಸಾವಿಗೆ ಕಾರಣವಾಗಿತ್ತು. ಆ ಬಳಿಕ ಸಹಾಯಕ ಕಮಿಷನರ್ ಕೆ ಎ ಅಪ್ಪಯ್ಯ ಕದಿನ ಬಳಕೆಯನ್ನು ನಿಲ್ಲಿಸುವಂತೆ ದೇವಸ್ಥಾನ ಆಡಳಿತಾಧಿಕಾರಿಗಳಿಗೆ ನಿರ್ದೇಶಿಸಿದ್ದರು.

LEAVE A REPLY