ಸಿದ್ದರಾಮಯ್ಯ ಸರಕಾರದ ಮೇಲೆ ಜನತೆಗೆ ಸಂತೃಪ್ತಿ

ಕ್ಲೀನ್ ಸ್ವೀಪ್‍ಗೆ ರಮಾನಾಥ ರೈ ತೃಪ್ತಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಈ ಬಗ್ಗೆ ರಾಜ್ಯದ ಜನತೆಗೆ ಸಾಕಷ್ಟು ಸಂತೃಪ್ತಿ ಇದೆ ಎಂಬುದಕ್ಕೆ ರಾಜ್ಯದ ಎರಡೂ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಬಹಳಷ್ಟು ಅಪಪ್ರಚಾರಗಳ ನಡುವೆಯೂ ಕಾಂಗ್ರೆಸ್ ಕ್ಲೀನ್ ಸ್ವೀಪ್ ಸಾಧಿಸಿರುವುದೇ ಸಾಕ್ಷಿಯಾಗಿದೆ” ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಂತೋಷ ವ್ಯಕ್ತಪಡಿಸಿದರು.

ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿ ಸಿ ರೋಡು ಪೇಟೆಯಲ್ಲಿ ಸಂಭ್ರಮಾಚರಣೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಗೂ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವದಿಂದಲೂ ಎಲ್ಲ ವರ್ಗದ ಜನರ ನಾಡಿಮಿಡಿತ ಅರಿತುಕೊಂಡು ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದೆ. ಹೀಗಿರುತ್ತಾ ಬಿಜೆಪಿಗರ ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬುದು ತಿರುಕನ ಕನಸು ಎಂದು ಲೇವಡಿ ಮಾಡಿದರು.

“ದಕ್ಷಿಣ ಭಾರತದಲ್ಲಿ ಇಂದಿಗೂ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ವಿಫಲವಾಗಿರುವ ಬಿಜೆಪಿ ಕರ್ನಾಟಕದಲ್ಲಿ ವಿವಿಧ ಕಾರಣಗಳಿಗಾಗಿ ಜನರನ್ನು ವಿಭಜಿಸಿ ತನ್ನ ಅಧಿಕಾರದ ಕನಸು ಕಾಣುತ್ತಿದೆ. ಇದಕ್ಕೆ ಕರ್ನಾಟಕದ ಜನ ಎಂದಿಗೂ ಅವಕಾಶ ನೀಡಲಾರರು” ಎಂದು ಸಚಿವ ರೈ ವಿಶ್ವಾಸ ವ್ಯಕ್ತಪಡಿಸಿದರು. “ರಾಜ್ಯದ ಜನ ಸಂಪೂರ್ಣವಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಮೆಚ್ಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಉಪಚುನಾವಣೆ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ” ಎಂದು ಪ್ರತಿಕ್ರಯಿಸಿದರು.