ನಿಷೇಧದ ಬಳಿಕ ಬ್ಯಾಂಕುಗಳಿಂದ 2,000 ರೂ ನೋಟೇ ವಿತರಣೆ

ಚಿಲ್ಲರೆ ಹಣಕ್ಕಾಗಿ ಪರದಾಟ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಕೇಂದ್ರ ಸರ್ಕಾರ 500 ರೂ, 1,000 ರೂ ನೋಟು ರದ್ದುಪಡಿಸಿದ ಬಳಿಕ ಎದುರಾಗಿರುವ ಚಿಲ್ಲರೆ ಸಮಸ್ಯೆ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. ಜನರಿಗೆ ಬ್ಯಾಂಕುಗಳಲ್ಲಿ ಹೆಚ್ಚಾಗಿ 2,000 ರೂ ನೋೀಟುಗಳನ್ನೇ ನೀಡುತ್ತಿದ್ದು, ಇಷ್ಟೊಂದು ದೊಡ್ಡ ಮೊತ್ತದ ನೋಟನ್ನು ಯಾರಿಗೆ ಕೊಟ್ಟು ಚಿಲ್ಲರೆ ಪಡೆಯುವುದು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕೇಂದ್ರ ಸರ್ಕಾರ ನೋಟು ರದ್ದತಿ ಮಾಡಿದ ಬಳಿಕ ಇದನ್ನು ಬ್ಯಾಂಕುಗಳಲ್ಲಿ ಜಮಾ ಮಾಡಿರುವ ಜನರು ಇದೀಗ ದಿನನಿತ್ಯದ ವ್ಯವಹಾರಕ್ಕಾಗಿ ಚಿಲ್ಲರೆ ಹಣಕ್ಕಾಗಿ ಪರದಾಡುವಂತಾಗಿದೆ. ನೋಟ್ ರದ್ದತಿ ಆದೇಶವಾಗಿ ಸರಿಸುಮಾರು ಒಂದು ತಿಂಗಳಾಗುತ್ತಾ ಬಂದರೂ ಇನ್ನೂತನಕ ಬ್ಯಾಂಕುಗಳಲ್ಲಿ ಸಮರ್ಪಕವಾಗಿ ಜನರಿಗೆ ಹಣ ಸಿಗದೇ ಇರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜನಸಾಮಾನ್ಯರಂತೆ ನೌಕರರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಸಂಬಳದ ಹಣ ಡ್ರಾ ಮಾಡಲು ಕೆಲವು ನೌಕರರು ಬ್ಯಾಂಕುಗಳಿಗೆ ಸಾಕಷ್ಟು ಸಲ ಅಲೆದಾಡಿ ಕೊನೆಗೆ ಬ್ಯಾಂಕಿನವರು ಕೊಟ್ಟಷ್ಟು ಹಣ ತಂದ ಬಗ್ಗೆಯೂ ವರದಿಯಾಗಿದೆ.

ಬ್ಯಾಂಕುಗಳಲ್ಲಿ ವಾರಕ್ಕೆ 24,000 ರೂ ಡ್ರಾ ಮಾಡಬಹುದು ಎಂದು ಬ್ಯಾಂಕುಗಳ ಹಿರಿಯಣ್ಣ ರಿಸರ್ವ್ ಬ್ಯಾಂಕ್ ಆದೇಶಿಸಿದ್ದರೂ ಸಹ ಹೆಚ್ಚಿನ ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ದಿನಕ್ಕೆ 4,000 ರೂ, 6,000 ರೂ ಮಾತ್ರ ವಿತರಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ “ನಮಗೆ ಸರಿಯಾಗಿ ಹಣ ಬಟವಾಡೆ ಆಗುತ್ತಿಲ್ಲ. ನಮಗೆ ಬರುತ್ತಿರುವ ಹಣದ ವ್ಯವಸ್ಥೆ ನೋಡಿಕೊಂಡು ಗ್ರಾಹಕರಿಗೆ ವಿತರಿಸಲಾಗುತ್ತಿದೆ” ಎಂದು ಸಮಜಾಯಿಸುತ್ತಿದ್ದಾರೆ.

ಜನರು ಯಾವುದೇ ಸಾಮಗ್ರಿ ಪಡೆಯಲು ಹೋದರೂ ನಿಮ್ಮ ಬಳಿ ಇರುವುದು ಯಾವ ನೋಟು ಎಂದು ವಿಚಾರಿಸಿಯೇ ಅಂಗಡಿಯವರು ಸಾಮಗ್ರಿ ನೀಡಲು ಮುಂದಾಗುತ್ತಿದ್ದಾರೆ. ಹೊಸ 2,000 ರೂ ನೋಟು ನೀಡಿದರೆ ಉಳಿದ ಹಣಕ್ಕೆ ಚಿಲ್ಲರೆ ಇಲ್ಲ ಎಂದೋ ಅಥವಾ ಹಳೇ ನೋಟು ಕೊಡುತ್ತೇವೆ ಎಂದು ಹೇಳುತ್ತಿರುವ ಬಗ್ಗೆಯೂ ವರದಿಯಾಗಿದೆ.

ನೋಟು ನಿಷೇಧದ ಬಳಿಕ ಚಿಲ್ಲರೆ ಸಮಸ್ಯೆಯಿಂದ ಅಂಗಡಿಕಾರರು ಪರದಾಡುವಂತಾಗಿದೆ. ಎಲ್ಲರೂ 2,000 ರೂ ನೋಟು ತಂದರೆ ನಾವು ಚಿಲ್ಲರೆಯನ್ನು ಎಲ್ಲಿಂದ ಕೊಡುವುದು ಎನ್ನುವುದು ಅಂಗಡಿಕಾರರ ಪ್ರಶ್ನೆಯಾಗಿದೆ. ರಾಜ್ಯದಲ್ಲಿ 500 ರೂ ಹೊಸ ನೋಟುಗಳು ಬಿಡುಗಡೆಯಾಗಿದ್ದರೂ ಭಟ್ಕಳದಲ್ಲಿ ಯಾವ ಬ್ಯಾಂಕಿನವರೂ ಅದನ್ನು ಸರಬರಾಜು ಮಾಡಿದಂತಿಲ್ಲ. ಹೊಸ 500 ರೂ ನೋಟು ಜನರ ಕೈಗೆ ಸಿಕ್ಕಿದ್ದರೆ ಸ್ವಲ್ಪಮಟ್ಟಿಗಾದರೂ ಸಮಸ್ಯೆ ಬಗೆಹರಿಯುತ್ತಿತ್ತು ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ನೋಟು ರದ್ದತಿ ಬಳಿಕ ಮಾರುಕಟ್ಟೆಯಲ್ಲಿನ ಎಲ್ಲಾ ವ್ಯಾಪಾರ, ವಹಿವಾಟಿನ ಮೇಲೂ ಹೊಡೆತ ಬಿದ್ದಿದೆ. ಆರಂಭದ ಒಂದು ವಾರದಲ್ಲಿ ಸಂಪೂರ್ಣ ನೆಲಕಚ್ಚಿದ್ದ ಮಾರುಕಟ್ಟೆ ಇದೀಗ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೂ ಸಹ ಹೆಚ್ಚಾಗಿ ಚಿಲ್ಲರೆ ಹಣ ಚಲಾವಣೆ ಆಗದೇ ಇರುವುದು ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಈ ಸಮಸ್ಯೆ ಯಾವಾಗ ಬಗೆಹರಿದೀತು ಎಂದು ಎಲ್ಲರೂ ಚರ್ಚಿಸುತ್ತಿರುವುದು ಕಂಡುಬಂದಿದೆ.