ಜನರಿಗೆ ನ್ಯಾಯ ದೊರೆಯುವ ವಿಶ್ವಾಸ ಹೊರಟು ಹೋಗಿದೆ

ಪ್ರಶಾಂತ ಭೂಷಣ

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಭರಿಸಲು ಸಾಧ್ಯವಾಗದ ವಕೀಲರ ಶುಲ್ಕ, ನ್ಯಾಯಾಧೀಶರ ಮೇಲೆ ಪ್ರಬಲ ವ್ಯಕ್ತಿಗಳ ಪ್ರಭಾವ ಮೊದಲಾದವುಗಳಿಂದ ಜನರಿಗೆ ನ್ಯಾಯ ದೊರೆಯುವ ವಿಶ್ವಾಸ ಹೊರಟು ಹೋಗಿದೆ” ಎಂದು ಸುಪ್ರೀಂ ಕೋರ್ಟಿನ ಖ್ಯಾತ ವಕೀಲ, ಜನಲೋಕಪಾಲ್ ಆಂದೋಲನದ ಮುಖ್ಯಸ್ಥ ಪ್ರಶಾಂತ ಭೂಷಣ ಹೇಳಿದರು.

ನಗರದ ದಿವೇಕರ್ ಕಾಲೇಜಿನಲ್ಲಿ ಶನಿವಾರ ನಡೆದ ಅಂತರ್ ಕಾಲೇಜು ವಿದ್ಯಾರ್ಥಿಗಳ ಚರ್ಚಾಕೂಟದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು. “ದೇಶದಲ್ಲಿ ಶೇ 80ಕ್ಕೂ ಹೆಚ್ಚು ಜನ ನ್ಯಾಯ ಕೇಳಲು ನ್ಯಾಯಾಲಯದ ಮೆಟ್ಟಿಲು ಹತ್ತದಿರುವ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಂಗ ವ್ಯವಸ್ಥೆ ಪ್ರಬಲ ರಾಜಕಾರಣಿಗಳ ಆಯುಧವಾಗಿ ಬಳಕೆಯಾಗುತ್ತಿದೆ. ಕಾರ್ಯಾಂಗ, ಶಾಸಕಾಂಗಗಳಂತೆ ನ್ಯಾಯಾಂಗಕ್ಕೆ ಕೂಡ ತನಿಖೆಗೆ ಒಳಪಡಬಹುದಾದ ಹೊಣೆಗಾರಿಕೆ ಇರಬೇಕು. ಹಲವು ಸುಧಾರಣೆಗಳು ಆಗಬೇಕು. ಹಾಗಾಗಿ ನಾವು ಕ್ಯಾಂಪೇನ್ ಫಾರ್ ಜ್ಯುಡಿಶಿಯಲ್ ಅಕೌಂಟೆಬಿಲಿಟಿ ಆ್ಯಂಡ್ ರಿಫಾಮ್ರ್ಸ್ ಎಂಬ ಆಂದೋಲನ ನಡೆಸುತ್ತಿದ್ದೇವೆ” ಎಂದರು.

“ವೈದ್ಯಕೀಯ ಕಾಲೇಜೊಂದರಿಂದ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರ ಮೇಲೆ ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ ಸರ್ಕಾರದ ಕೈಗೊಂಬೆಯಾಗಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ಆಗುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ತನಿಖಾ ತಂಡವೊಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ನಮ್ಮ ಸಂಸ್ಥೆ ಆಗ್ರಹಿಸಿತ್ತು. ಆದರೆ ನಮ್ಮ ಆಗ್ರಹಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನಮ್ಮ ಸಂಸ್ಥೆಗೆ ನ್ಯಾಯಾಂಗ ನಿಂದನೆ ಆರೋಪದ ಮೇಲೆ 25 ಲಕ್ಷ ರೂ ದಂಡ ವಿಧಿಸಿದೆ. ನ್ಯಾಯಾಧೀಶರ ಆರೋಪಗಳನ್ನು ನಿಷ್ಪಕ್ಷಪಾತವಾಗಿ ವಿಚಾರಣೆ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ಆಯೋಗ ರಚನೆ ಆಗಬೇಕಿದೆ” ಎಂದು ಒತ್ತಾಯಿಸಿದರು.