ಕನ್ನಡ ಚಿತ್ರರಂಗಕ್ಕೆ ಜನರ ಒಲವು ಕಡಿಮೆಯಾಗಿದೆ

ನಟ ದೊಡ್ಡಣ್ಣ ಉವಾಚ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕನ್ನಡದ ಹಿರಿಯ ಚಿತ್ರ ನಟ ದೊಡ್ಡಣ್ಣ ಮುಲ್ಕಿಯ ಬಪ್ಪನಾಡು ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಅವರು, “ಕರಾವಳಿ ಭಾಗದ ಜನರು ದೊಡ್ಡ ದೈವಭಕ್ತರು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ನಾಗಾರಾಧನೆ ದೇಶಕ್ಕೇ ಮಾದರಿಯಾಗಿದೆ. ಇಲ್ಲಿಗೆ ಬರುವುದೆಂದರೆ ನನಗೆ ಬಲು ಇಷ್ಟ” ಎಂದರು.

ಈ ಭಾಗದಲ್ಲಿ ಚಿತ್ರೀಕರಣ ಬಲು ಸುಲಭ ಎಂದ ಅವರು, “ಇಲ್ಲಿ ಚಿತ್ರೀಕರಣಕ್ಕೆ ಪೊಲೀಸರನ್ನು ಬಳಸುವ ಅವಶ್ಯಕತೆಯೇ ಇಲ್ಲ. ಇಲ್ಲಿನ ಜನ ಕಲಾವಿದರನ್ನು ಯಾವತ್ತೂ ನೋಯಿಸುವುದಿಲ್ಲ. ಪ್ರತಿಯೊಬ್ಬರೂ ಸಹಕಾರ ನೀಡುತ್ತಾರೆ” ಎಂದರು.  ಗಡ್ಡಧಾರಿಯಾಗಿದ್ದ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, “ತೆಲುಗಿನಲ್ಲಿ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಾನು ನಟಿಸುತ್ತಿದ್ದು, ಅದಕ್ಕಾಗಿ ಈ ವೇಷ. ಈಗಾಗಲೇ ಚಿತ್ರೀಕರಣವು ಅಂತಿಮ ಹಂತದಲ್ಲಿದೆ. ನಾನು ಈಗಾಗಲೇ ವಿವಿಧ ಭಾಷೆಗಳಲ್ಲಿ ಒಟ್ಟು 637 ಚಿತ್ರಗಳಲ್ಲಿ ನಟಿಸಿದ್ದೇ£” ಎಂದರು.

“ಇತ್ತೀಚಿನ ದಿನಗಳಲ್ಲಿ ಜನರು ರಿಯಾಲಿಟಿ ಶೋಗಳತ್ತ ಆಸಕ್ತಿ ತೋರಿಸುತ್ತಿರುವ ಕಾರಣ ಕನ್ನಡ ಚಿತ್ರಗಳತ್ತ ಒಲವು ಕಡಿಮೆಯಾಗಿದೆ. ಆದರೆ ಜನಮೆಚ್ಚುವ ಚಿತ್ರಗಳನ್ನು ಈಗಲೂ ಜನರು ಇಷ್ಟಪಡುತ್ತಾರೆ. ರಿಯಾಲಿಟಿ ಶೋಗಳನ್ನು ಮೀರಿಸಿದ ಚಿತ್ರಗಳ ಅವಶ್ಯಕತೆ ಇದೆ. ಜನರು ಈಗಲೂ ಡಾ ರಾಜಕುಮಾರ್ ಚಿತ್ರಗಳನ್ನು ನೋಡುವುದಿಲ್ಲವೇ. ಅದೇ ರೀತಿಯ ಚಿತ್ರಗಳು ಬರಬೇಕು” ಎಂದವರು ಅಭಿಪ್ರಾಯಿಸಿದರು. ಬಳಿಕ ದೇವಳದಲ್ಲಿ ಮೇ 5ರಂದು ನಡೆಯಲಿರುವ ಶತ ಚಂಡಿಕಾದ್ವಾರ ಹಾಗೂ ರಜತ ಕವಚ ಸಮರ್ಪಣಾ ಕಾರ್ಯಕ್ರಮದ ಕಾರ್ಯಾಲಯವನ್ನು ದೊಡ್ಡಣ್ಣ ಉದ್ಘಾಟಿಸಿದರು.

ಸೆಲ್ಫಿಗಾಗಿ ಮುಗಿಬಿದ್ದ ಜನ

ಬಪ್ಪನಾಡಿಗೆ ನಟ ದೊಡ್ಡಣ್ಣ ಅನಿರೀಕ್ಷಿತ ಭೇಟಿ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರು ಖ್ಯಾತ ನಟನೊಡನೆ ಸೆಲ್ಫಿಗಾಗಿ ಮುಗಿಬಿದ್ದರು. ಇದರಿಂದ ದೇವಳದಲ್ಲಿ ಕೊಂಚ ನೂಕುನುಗ್ಗಲು ಉಂಟಾಯಿತು. ಕೂಡಲೇ ಮುಲ್ಕಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.