ನೋಟು ಅಮಾನ್ಯ ; ಜನರ ಪರದಾಟ

ನೋಟು ಅಮಾನ್ಯಗೊಂಡು ತಿಂಗಳಾಗುತ್ತಿದ್ದರೂ ಇನ್ನೂ ದೇಶದ ಆರ್ಥಿಕ ಸ್ಥಿತಿ, ಜನಸಾಮಾನ್ಯರ ಪರದಾಟ ತಹಬದಿಗೆ ಬಂದಿಲ್ಲ. ಜನರ ಹಾಹಾಕಾರ ಗಮನಿಸಿದರೆ ಪ್ರಧಾನಿಯವರ ಈ ನಿರ್ಧಾರದ ಹಿಂದೆ ಪೂರ್ವ ಸಿದ್ಧತೆ ಸರಿಯಾಗಿಲ್ಲದಿರುವುದು ಕಾಣುತ್ತಿದೆ. ಕಾಳಧನಿಕರನ್ನು ಹಿಡಿಯಲು ದೊಡ್ಡ ಹೆಜ್ಜೆ ಇರಿಸಿ ಈ ಕಾಲ ಕೆಳಗೆ ಸಿಲುಕಿ ಅಪ್ಪಚಿಯಾದ ಸಾಮಾನ್ಯರ ಬಗೆಗೆ ಮೋದಿಯವರು ಚಿಂತಿಸಬೇಕಿತ್ತು.

ಈಗ ಚಲಾವಣೆಯಲ್ಲಿರುವ 2000 ರೂಪಾಯಿ ನೋಟಿಗೆ ಸರಿಯಾದ ಚಿಲ್ಲರೆ ಸಿಗುತ್ತಿಲ್ಲ. 500 ರೂಪಾಯಿ ಮುಖಬೆಲೆಯ ಹೊಸ ನೋಟು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇನ್ನು 100 ರೂಪಾಯಿ ಮುಖಬೆಲೆಯ ನೋಟುಗಳು ಚಿನ್ನವಾಗಿ ಹೋಗಿವೆ.

ಮೋದಿಯವರ ನಿರ್ಧಾರಕ್ಕೆ ತಾಳ್ಮೆಯಿಂದ ಸಹಕರಿಸಿರುವ ಜನತೆ ಇನ್ನೂ ನಿಯಂತ್ರಣಕ್ಕೂ ಬಾರದ ಈ ಸಮಸ್ಯೆಯ ಬಗೆಗೆ ಇದೀಗ ಆಕ್ರೋಶಕ್ಕೊಳಗಾಗುತ್ತಿದ್ದಾರೆ. ಈಗ ದೇಶದಾದ್ಯಂತ ಒಂದು ರೀತಿ ಆರ್ಥಿಕ ತುರ್ತು ಪರಿಸ್ಥಿತಿ ಇರುವಂತೆ ಭಾಸವಾಗುತ್ತಿದೆ. ಅಭಿವೃದ್ಧಿ ಚಟುವಟಿಕೆಗಳು ತಾತ್ಜಲಿಕವಾಗಿ ನಿಂತಿವೆ. ಮೋದಿಯವರ ಲೆಕ್ಕಾಚಾರವೇನೇ ಇರಲಿ. ಜನಸಾಮಾನ್ಯರಿಗೆ ಹಣಕಾಸಿನ ವಿಚಾರದಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕಿದೆ ಹಾಗೂ ಬ್ಯಾಂಕ್ ಎಟಿಎಂಗಳಲ್ಲಿ ಹಣ ತೆಗೆಯುವ ಮಿತಿಯನ್ನೂ ಸಡಿಲಗೊಳಿಸಬೇಕಿದೆ.

  • ನವೀನ್ ಸುವರ್ಣ, ಯೆಯ್ಯಾಡಿ-ಮಂಗಳೂರು