ಹೆಮ್ಮಾಡಿ ರಸ್ತೆ ಅಪಘಾತದಲ್ಲಿ ಪ್ರಯಾಣಿಕನ ಸ್ಪಾಟ್ ಡೆತ್

ಆಟೋ ಚಾಲಕನ ಕೈ ಮುರಿದು ಗಂಭೀರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಿಕ್ಷಾ ಪ್ರಯಾಣಿಕ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಆಟೋ ಚಾಲಕ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಸೇರಿದರು.

ಮೃತಪಟ್ಟ ಪ್ರಯಾಣಿಕನನ್ನು ಶಿವಮೊಗ್ಗ ಜಿಲ್ಲೆಯ ಸೊರಬ ನಿವಾಸಿ ಗಣೇಶ್ (37).  ಗಂಭೀರ ಗಾಯಗೊಂಡವ ಆಟೋ ಚಾಲಕ ಕುಂದಾಪುರದ ಕೋಡಿ ರಸ್ತೆ ನಿವಾಸಿ ಚಂದ್ರಶೇಖರ ಶೇರೆಗಾರ್ (52).ಗಣೇಶ್ ಸೊರಬದಿಂದ ತಡರಾತ್ರಿಯ ಬಸ್ಸೊಂದರಲ್ಲಿ ಬಂದಿದ್ದು, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಇಳಿದು ಅಲ್ಲಿಯೇ ಇದ್ದ ಚಂದ್ರಶೇಖರ್ ಶೇರೇಗಾರ್ ಅವರ ಆಟೋವನ್ನು ಬಾಡಿಗೆಗೆ ಪಡೆದು ಹೆಮ್ಮಾಡಿಯ ಮೂವತ್ತುಮುಡಿ ಎಂಬಲ್ಲಿ ಇಂದು ನಡೆಯಲಿರುವ

ಪೂಜೆಗೆಂದು ಹೊರಟಿದ್ದರೆನ್ನಲಾಗಿದೆ. ಹೆಮ್ಮಾಡಿ ಜಂಕ್ಷನ್ ದಾಟುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಕೇರಳ ರಾಜ್ಯ ನೋಂದಾಯಿತ ಸರಕು ತುಂಬಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪ್ರಯಾಣಿಕ ಗಣೇಶ್ ತಲೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕನ ಎಡಕೈ ತುಂಡಾಗಿದ್ದು, ತಲೆಗೆ ಗಾಯಗಳಾಗಿ ಗಂಭೀರಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ನಡೆದ ಸಂದರ್ಭ ಕೋಟದ ಪೊಲೀಸ್ ಉಪನಿರೀಕ್ಷಕ ಸಂತೋಷ್ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ಕಾರವಾರ ಕಡೆಗೆ ಸಂಚರಿಸುತ್ತಿದ್ದವರು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದಾರೆ. ಅಂಬ್ಯುಲೆನ್ಸ್ ವಾಹನಕ್ಕೆ ಹಾಗೂ ಕುಂದಾಪುರ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಮೃತ ಗಣೇಶ್ ಮೃತದೇಹ ಕುಂದಾಪುರ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.