ಅಪರಿಚಿತ ವಾಹನ ಗುದ್ದಿ ಪಾದಚಾರಿ ಮೃತ್ಯು

ಡಿಕ್ಕಿಯಾದ ಗಾಡಿ ಪರಾರಿ, ಸ್ಥಳಕ್ಕೆ ಬಾರದ 108


ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತೆಂಕ ಎರ್ಮಾಳು ಜಂಕ್ಷನಿನಲ್ಲಿ ಪಾದಚಾರಿಯೊಬ್ಬಗೆ ಡಿಕ್ಕಿಯಾದ ಅಪರಿಚಿತ ವಾಹನವೊಂದು ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಿದ್ದು, ಬಲಗಾಲು ಮುರಿತಕ್ಕೊಳಗಾಗಿ ತೀವ್ರ ರಕ್ತಸ್ರವವಾಗುತ್ತಿದ್ದ ಗಾಯಾಳುವನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬುಲೆನ್ಸ್ ಸ್ಥಳಕ್ಕೆ ಬಾರದ್ದರಿಂದ ಅರ್ಧ ಘಂಟೆ ವಿಳಂಬವಾಗಿ ಖಾಸಗಿ ಅಂಬುಲೈನ್ಸ್ ಮೂಲಕ ಮಣಿಪಾಲಕ್ಕೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಪಾದಚಾರಿ ಮೃತಪಟ್ಟಿದ್ದಾರೆ.

ತೆಂಕ ಎರ್ಮಾಳು ಪಡು ನಿವಾಸಿ ಕಿಶೋರ್ ಬಂಗೇರ (62) ಮೃತಪಟ್ಟವರು. ಮೀನುಗಾರಿಕಾ ಕೆಲಸ ನಿರ್ವಹಿಸುತ್ತಿದ್ದ ಇವರು ಸಂಜೆ ಹೊತ್ತು ಎರ್ಮಾಳು ಜಂಕ್ಷನ್ ಕಣಜಾರಿಗೆ ಬಂದಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿದೆ. ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳುವಂತೆ ಅಪಘಾತ ನಡೆಸಿದ್ದು ಮಂಗಳೂರು ಕಡೆಗೆ ಅತೀ ವೇಗವಾಗಿ ಹೋಗುತ್ತಿದ್ದ ಕಾರು ಎನ್ನುತ್ತಾರಾದರೂ ಕೆಲವರು ಮೀನಿನ ವಾಹನ ಎನ್ನುತ್ತಾರೆ. ತಕ್ಷಣ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಎಲ್ಲಾ ಕಡೆಗೂ ಪೊಲೀಸರು ಪರಾರಿಯಾದ ವಾಹನ ಪತ್ತೆಗಾಗಿ ಮಾಹಿತಿ ರವಾನಿಸಿದ್ದರಾದರೂ ತಡಾರಾತ್ರಿಯವರೆಗೂ ಅಪಘಾತ ನಡೆಸಿದ ವಾಹನ ಪತ್ತೆಯಾಗಿಲ್ಲ.

ಗಾಯಾಳುವನ್ನು ತಕ್ಷಣ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ಬಳಿಕ ಮಣಿಪಾಲಕ್ಕೆ ಸಾಗಿಸುವುದಕ್ಕಾಗಿ 108 ಅಂಬುಲೆನ್ಸಿಗೆ ಕರೆ ಮಾಡಿ ಅರ್ಧ ಘಂಟೆ ಕಳೆದರೂ ಅದು ಬಾರದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಅಂಬುಲೆನ್ಸಿನಲ್ಲಿ ಮಣಿಪಾಲಕ್ಕೆ ಸಾಗಿಸಲಾಗಿದ್ದು, ತೀವ್ರ ರಕ್ತಸ್ರಾವವಾಗುತ್ತಿದ್ದರಿಂದ ರಕ್ತದೊತ್ತಡ ಕುಸಿದು ದೇಹ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆತ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪಡುಬಿದ್ರಿಯಲ್ಲಿ ಪ್ರಥಮ ಚಿಕಿತ್ಸೆಯ ಸಂದರ್ಭ ಲವಲವಿಕೆಯಿಂದ ಇದ್ದ ಗಾಯಾಳು ಹೊತ್ತು ಕಳೆಯುತ್ತಿದಂತೆ ರಕ್ತಸ್ರಾವ ತೀವ್ರಗೊಂಡಿದ್ದರಿಂದ ಕುಸಿದಿದ್ದರು. ಸರಿಯಾದ ಸಂದರ್ಭದಲ್ಲಿ ಅಂಬುಲೆನ್ಸ್ ಬರುತ್ತಿದ್ದರೆ ಗಾಯಾಳು ಬದುಕುಳಿಯುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಮಾನ್ಯ ನೋಟು ಸ್ವೀಕರಿಸದ ಆಸ್ಪತ್ರೆ

ಮಣಿಪಾಲ ಆಸ್ಪತ್ರೆಯಲ್ಲಿ 500 ಮತ್ತು 1000 ರೂ ನೋಟು ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಲಾಗಿದೆ ಎಂದು ಗಾಯಾಳು ಜೊತೆ ಆಸ್ಪತ್ರೆಗೆ ಹೋದವರು ಮಾಧ್ಯಮಕ್ಕೆ ತಿಳಿಸಿದ್ದು, ಆಸ್ಪತ್ರೆಯ ಈ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ, ಪೆಟ್ರೋಲ್ ಬಂಕುಗಳಲ್ಲಿ ಹಳೆ ನೋಟು ಸ್ವೀಕರಿಸಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಆಸ್ಪತ್ರೆಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಜನ ಆರೋಪಿಸಿದ್ದಾರೆ.