ಈದ್ ಮಿಲಾದ್ : ಮುಂಜಾಗೃತಾ ಕ್ರಮವಾಗಿ ಬಂಟ್ವಾಳದಲ್ಲಿ ಶಾಂತಿ ಸಭೆ

ಬಂಟ್ವಾಳ ನಗರ ಠಾಣೆಯಲ್ಲಿ ನಡೆದ ಶಾಂತಿ ಸಭೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಈದ್ ಮಿಲಾದ್ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಬಂಟ್ವಾಳ ನಗರ ಠಾಣೆಯಲ್ಲಿ ಗುರುವಾರ ಶಾಂತಿ ಸಭೆ ನಡೆಯಿತು.

ಈ ಸಂದರ್ಭ ಮಾತನಾಡಿದ ಎಸೈ ನಂದಕುಮಾರ್, “ಸೌಹಾರ್ದಯುತವಾಗಿ ಹಬ್ಬವನ್ನು ಆಚರಣೆ ಮಾಡಿಕೊಳ್ಳಿ. ವಿವಿಧ ಮಸೀದಿಗಳ ಆಶ್ರಯದಲ್ಲಿ ಎಂದಿನಂತೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಿ. ಆದರೆ ವ್ಯಾಪ್ತಿ ಮೀರಿದ ವಾಹನ ಜಾಥಗಳಿಗೆ ಇಲಾಖೆ ಅವಕಾಶ ನೀಡುವುದಿಲ್ಲ. ನಿಯಮ ಮೀರಿದ ವಾಹನ ಜಾಥ ಮಾಡುವ ಮಂದಿ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು” ಎಂದು ಎಚ್ಚರಿಸಿದರು.

“ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕಾ ಕ್ರಮವಾಗಿ ತಾಲೂಕಿನ ವಿವಿಧೆಡೆ ಸೀಸಿ ಕ್ಯಾಮರಗಳನ್ನು ಆಳವಡಿಸಲಾಗಿದೆ. ಹಬ್ಬಕ್ಕೆ ಶುಭಕೋರುವ ಬ್ಯಾನರ್, ಬಂಟ್ಟಿಗ್ಸ್ ಹಾಗೂ ಧ್ವಜಗಳನ್ನು ಅಳವಡಿಸಲು ಸ್ಥಳೀಯಾಡಳಿತಗಳ ಒಪ್ಪಿಗೆ ಪಡೆಯಬೇಕು” ಎಂದವರು ಹೇಳಿದರು.