ಅಕ್ಷರದಾಸೋಹ ನೌಕರರ ವೇತನ ಏರಿಕೆಗಾಗಿ ಒತ್ತಾಯಿಸಿ ಮನವಿ

ಮಂಗಳೂರು : ಅಕ್ಷರದಾಸೋಹ ನೌಕರರ ಅನುದಾನ ಕಡಿತಗೊಳಿಸಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಹಾಗೂ ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಒಪ್ಪಿರುವ ವೇತನ ಏರಿಕೆಯನ್ನು ಇಂದಿನ ಕೇಂದ್ರ ಸರಕಾರ ಜ್ಯಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪರವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿಯನ್ನು ನೀಡಿ ಒತ್ತಾಯಿಸಲಾಯಿತು.

“ದೇಶವ್ಯಾಪಿಯಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದ ಮುಖಾಂತರ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟ ಯೋಜನೆಯಲ್ಲಿ ದುಡಿಯುವ ಕಾರ್ಮಿಕರಿಗೆ ವೇತನ ನೀಡಲಾಗುತ್ತಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಕಾರ್ಮಿಕರ ವೇತನವನ್ನು ಕಡಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಮಾತ್ರವಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಕಡಿತಗೊಂಡಿದೆ ಎಂಬ ನೆಪದಲ್ಲಿ ಅಕ್ಷರದಾಸೋಹ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದು ಅಂತಹ ಕಾರ್ಮಿಕರಿಗೆ ಪುನರ್ ಕೆಲಸ ನೀಡಬೇಕು, ಕೆಲಸದ ಭದ್ರತೆ ಒದಗಿಸಬೇಕು. ಕ್ಲಸ್ಟರ್ ಕೇಂದ್ರಗಳ ಮುಖಾಂತರ ಅಡುಗೆ ಮಾಡುವ ಕ್ರಮವು ಕಾರ್ಮಿಕರ ಕೆಲಸದ ಭದ್ರತೆಗೆ ಅಪಾಯಕಾರಿಯಾಗಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.             ಇದೇ ಮನವಿಯನ್ನು ಸಹಾಯಕ ನಿರ್ದೇಶಕರು ಅಕ್ಷರದಾಸೋಹ ಅವರಿಗೂ ನೀಡಲಾಗಿದೆ.

ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಪ್ರದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿರಿಜ ಮೂಡಬಿದ್ರಿ, ಖಜಾಂಚಿ ಭವ್ಯಾ, ಜಿಲ್ಲಾ ಸಮಿತಿ ಸದಸ್ಯರಾದ ಪ್ರಮೀಳಾರವರು ಉಪಸ್ಥಿತರಿದ್ದರು.