ಪೌಲ್ ಗೋವಿಯಸ್ ಪತ್ನಿ ಸಾವಿನ ಪ್ರಕರಣ ತನಿಖೆಗೆ ಮರುಜೀವ ಸಂಭವ

 

 ತಂದೆಯಿಂದ ಮಗನ ಕೊಲೆ ಹಿನ್ನೆಲೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಹೊಸಬೆಟ್ಟು ಕರಿಂಗಾನದಲ್ಲಿ ಇತ್ತೀಚೆಗೆ ತಂದೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಮೂಡುಬಿದಿರೆ ಪೊಲೀಸರು ಎರಡು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಮಹಿಳೆಯೋರ್ವರು ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿದ ಪ್ರಕರಣಕ್ಕೆ ಮರುಜೀವ ನೀಡುವ ಸಾಧ್ಯತೆಯಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿ ಪೌಲ್ ಗೋವಿಯಸ್ (83) ಅವರನ್ನು ಅವರ ಕಿರಿಯ ಮಗ ಡೋಲ್ಪಿ ಗೋವಿಯಸ್ ಕೊಲೆ ಮಾಡಿದ್ದ. ನಂತರ ಅಲ್ಲಿಗೆ ಬಂದಿದ್ದ ಆತನ ಸಹೋದರ ಸ್ಟ್ಯಾನಿಯ ಕೊಲೆಗೂ ಪ್ರಯತ್ನ ನಡೆದಿದ್ದು ಗಾಯಗೊಡಿದ್ದ ಆತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿ ಡೋಲ್ಪಿಯನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳಪಡಿಸಲಾಗುತ್ತಿದೆ. ಡೋಲ್ಪಿ ಕುಟುಂಬ ಈ ಹಿಂದೆ ಹೊಸಬೆಟ್ಟುನಲ್ಲಿ ತಂದೆ-ತಾಯಿ ಜತೆ ವಾಸವಾಗಿದ್ದರು. ಮನೆಗೆ ಈತ ಕೂಡ ಸಾಕಷ್ಟು ಖರ್ಚು ಮಾಡಿದ್ದ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿ ಮನೆ ತೊರೆಯಲು ನಿರ್ಧರಿಸಿದ ಡೋಲ್ಪಿ ತನ್ನ ಪಾಲು ಕೊಡುವಂತೆ ತಂದೆಯಲ್ಲಿ ಕೇಳಿದ್ದ. ಆದರೆ ಮನೆಯವರು ಈತನಿಗೆ ಪಾಲು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ವಿಷಯದಲ್ಲಿ ವೈಷಮ್ಯ ಹೊಗೆಯಾಡತೊಡಗಿತು.

ಇತ್ತೀಚೆಗೆ ಕೋರ್ಟ್ ಆದೇಶದ ಪ್ರಕಾರ ಡಾಲ್ಪಿ ತನ್ನ ಮನೆ ಸಾಮಗ್ರಿಗಳನ್ನು ಕೊಂಡೊಯ್ಯಲು ಹೊಸಬೆಟ್ಟಿನ ತನ್ನ ಮನೆಗೆ ಬಂದಾಗ ಅಲ್ಲಿ ಆತನ ಸ್ವತ್ತುಗಳು ಯಾವುದೂ ಇಲ್ಲದಿದ್ದದ್ದು ಮನೆಯವರ ಮೇಲೆ ಆತನಿಗೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು ಈ ಎಲ್ಲಾ ಕಾರಣಕ್ಕೆ ಆತ ತನ್ನ ತಂದೆಯನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

ತಾಯಿ ಸಾವಿನ ಪ್ರಕರಣಕ್ಕೆ ಮರುಜೀವ

ಎರಡು ವರ್ಷದ ಹಿಂದೆ ಈತನ ತಾಯಿ ಲಿಲ್ಲಿ ಗೋವಿಯಸ್ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಡಾಲ್ಪಿ ಮನೆಯವರಿಗೆ ವಿರುದ್ಧವಾಗಿದ್ದುದರಿಂದ ಈತ ತಾಯಿಯನ್ನು ಕೊಲೆ ಮಾಡಿರಬೇಕೆಂಬ ಅನುಮಾನದಲ್ಲಿ ಮನೆಯವರು ಡಾಲ್ಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಹಳ್ಳ ಹಿಡಿದಿತ್ತು. ಇನ್ನೊಂದು ಮೂಲದ ಪ್ರಕಾರ ಲಿಲ್ಲಿ ಸಂಶಯಾಸ್ಪದ ಸಾವಿನ ಹಿಂದೆ ಆಕೆಯ ಪತಿ ಮತ್ತು ಮತ್ತೋರ್ವ ಪುತ್ರ ಸ್ಟ್ಯಾನಿಯ ಹೆಸರು ಕೇಳಿಬರತೊಡಗಿದೆ.

ಆಸ್ತಿ ವಿವಾದದಲ್ಲಿ ಲಿಲ್ಲಿ ತನ್ನ ಪುತ್ರ ಡಾಲ್ಪಿ ಪರವಾಗಿದ್ದರೆಂಬ ಕಾರಣಕ್ಕೆ ಪತಿ ಮತ್ತು ಮಗ ಸ್ಟ್ಯಾನಿ ಸೇರಿ ತೊಂದರೆ ಕೊಟ್ಟಿರುವ ಸಾಧ್ಯತೆ ಇದೆ ಎಂಬುದಕ್ಕೆ ಪೂರಕವೆಂಬಂತೆ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳಗಾಗಿರುವ ಡಾಲ್ಪಿ ಕೂಡ ಮಾಹಿತಿ ಹೊರಹಾಕಿದ್ದಾನೆನ್ನಲಾಗಿದೆ. ಇದು ನಿಜವಾದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಟ್ಯಾನಿ ವಿರುದ್ಧ ಕೂಡ ಕೊಲೆ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.