ಉಪಯೋಗಕ್ಕಿಲ್ಲದ ಗಸ್ತು ವಾಹನ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಗೃಹ ಇಲಾಖೆ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ವಿಶೇಷ ಯೋಜನೆಗಳ ಮೂಲಕ ಪೊಲೀಸರಿಗೆ ಆಧುನಿಕ ವ್ಯವಸ್ಥೆಯನ್ನು ಒಳಗೊಂಡಿರುವ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದಕ್ಕೆ ಉಪ್ಪಿನಂಗಡಿಗೆ ಬಂದ `ಹೈವೇ ಪಟ್ರೋಲ್’ ಉದಾಹರಣೆಯಾಗುತ್ತಿದೆ. ಇದು ಇದ್ದು ಸಾಧಿಸಿದ್ದಾದರೂ ಏನು ಎನ್ನುವ ಪ್ರಶ್ನೆಗಳು ಕೇಳಿ ಬರಲಾರಂಭಿಸಿದೆ.

ಹೆದ್ದಾರಿಯಲ್ಲಿ ಗಸ್ತು ತಿರುಗಿ ದರೋಡೆಯಂತಹ ಘಟನೆಗಳನ್ನು ತಡೆಯಬೇಕಾದ ಈ ವಾಹನ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ವಾಹನ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ಬಳಿಕ 4 ದಿನದ ಅಂತರದಲ್ಲಿ 2 ಹೆದ್ದಾರಿ ದರೋಡೆ ನಡೆಯಿತು. ಒಂದು ದರೋಡೆಯಲ್ಲಿ 5 ಲಕ್ಷ ಲೂಟಿ ಆಗಿದ್ದು, ಇನ್ನೊಂದರಲ್ಲಿ

ಚಾಲಕನಿಗೆ ಚೂರಿಯಿಂದ ಇರಿದು ಆತನಲ್ಲಿದ್ದ ನಗದು ಹಣ ದೋಚಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48 ದರೋಡೆಕೋರರಿಗೆ ಸೂಕ್ತವೆನಿಸಿದೆ. ಗುಂಡ್ಯದಿಂದ ಶಿರಾಡಿ ಘಾಟ್ ಆರಂಭಗೊಳ್ಳುತ್ತದೆ. ನಿರ್ಜನ ಪ್ರದೇಶ, ಹೆದ್ದಾರಿಯ ಇಕ್ಕೆಲ ಕಾಡು ಆವರಿಸಿಕೊಂಡಿದೆ. ಈಚೆಗೆ ಕಳೆದ 2 ವರ್ಷಗಳಿಂದ ಹಲವಾರು ದರೋಡೆ ಕೃತ್ಯಗಳು ನಡೆದವು. ಆ ಪೈಕಿ ಕಳೆದ ವರ್ಷ ಬೆಂಗಳೂರು, ಆಂಧ್ರ ಮೂಲದ 1 ದರೋಡೆ ತಂಡ ಪೊಲೀಸ್ ಬಲೆಗೆ ಬಿದ್ದಿದೆ. ಅದರ ಹೊರತಾಗಿ ಬಹುತೇಕ ಪ್ರಕರಣಗಳು ಹಳ್ಳ ಸೇರಿಕೊಂಡಿದೆ.

ಹೆದ್ದಾರಿಯಲ್ಲಿ ನಡೆಯುವ ದರೋಡೆ ಮತ್ತು ಅಪರಾಧ, ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಂದಂತಹ ವಾಹನ ಹೈವೇ ಪಟ್ರೋಲ್ ಸುಮಾರು 22 ಲಕ್ಷ ರೂಪಾಯಿ ಮೌಲ್ಯದ ಇನ್ನೋವಾ ಕಾರು. ಇದರಲ್ಲಿ ಸುಮಾರು 200 ಮೀಟರ್ ತನಕ ದೃಶ್ಯವನ್ನು ಸೆರೆ ಹಿಡಿಯಬಹುದಾದ ಆಧುನಿಕ ವ್ಯವಸ್ಥೆಯ ಕೆಮರಾ, ಮದÀ್ಯಪಾನ, ಡ್ರಗ್ಸ್ ಸೇವನೆ ಪತ್ತೆ ಯಂತ್ರ, ಲಾಕ್ ಸಿಸ್ಟಂ ಸೇರಿದಂತೆ ಸುಮಾರು 8ರಿಂದ 10 ಲಕ್ಷ ರೂಪಾಯಿ ಮೌಲ್ಯದ ಇತರೇ ಉಪಕರಣಗಳ್ನು ಒಳಗೊಂಡಿರುವ ವಾಹನ ಇದಾಗಿದ್ದರೂ ಉಪಯೋಗಕ್ಕಿಲ್ಲದಂತಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಂದ ಹೈವೇ ಪಟ್ರೋಲ್ ವಾಹನದಿಂದ ಸರ್ಕಾರದ ಉದ್ದೇಶದ ಕಾರ್ಯಾಚರಣೆ ನಡೆಯುತ್ತಿಲ್ಲ. ಇದು ಕೇವಲ ಆಗೊಮ್ಮೆ, ಈಗೊಮ್ಮೆ ಪೇಟೆಯೊಳಗೆ ನಿಲ್ಲಿಸಿ ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುವುದು, ದಾಖಲೆಗಳನ್ನು ಪರಿಶೀಲಿಸುವಂತದ್ದು ಮಾತ್ರ ನಡೆಯುತ್ತಿದೆ, ಈ ವಾಹನ ಗಸ್ತು ತಿರುಗುತ್ತಿದ್ದರೆ 4 ದಿನದ ಅಂತರದಲ್ಲಿ 2 ಹೆದ್ದಾರಿ ದರೋಡೆ ನಡೆಯುತ್ತಿರಲಿಲ್ಲ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿದೆ.