ಹೆದ್ದಾರಿ ಬದಿ ತ್ಯಾಜ್ಯ ಎಸೆಯುವವರ ಮೇಲೆ ನಿಗಾಕ್ಕೆ ಗಸ್ತು ತಂಡ ರಚನೆ

ತಪ್ಪಿತಸ್ಥರಿಗೆ ಕಾದಿದೆ ಕಠಿಣ ಶಿಕ್ಷೆ

ನಮ್ಮ ಪ್ರತಿನಿಧಿ ವರದಿ

 ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಹಲವೆಡೆ ತ್ಯಾಜ್ಯ ರಾಶಿಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಆಡಳಿತವು ಗಸ್ತು ತಂಡವೊಂದನ್ನು ರಚಿಸಿದ್ದು ಹೆದ್ದಾರಿ ಬದಿಗಳಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಇರಿಸಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಆರ್ ರವಿ ಹೇಳಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಮಾರ್ಗದರ್ಶನದಲ್ಲಿ  ತಾಲೂಕು  ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸಹಿತ ಐದು ಮಂದಿ ಸದಸ್ಯರಿರುವ ಗಸ್ತು ತಂಡ  ಪ್ರತಿ ದಿನ ಬೆಳಿಗ್ಗೆ 6ರಿಂದ 8 ಗಂಟೆಯ ತನಕ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಇಡಲಿದೆ.

ಯಾರಾದರೂ ತ್ಯಾಜ್ಯ ಎಸೆಯುವುದ್ನು ಕಂಡಲ್ಲಿ ಅವರ ಚಿತ್ರ ಹಾಗೂ ವಾಹನ ಸಂಖ್ಯೆಯನ್ನು ಕ್ಯಾಮರಾ ಮೂಲಕ ಸೆರೆ ಹಿಡಿದು   ಮೋಟಾರ್ ವಾಹನಗಳ ಕಾಯಿದೆಯ ಸೆಕ್ಷನ್ 177 ಅನ್ವಯ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪತ್ರ ಬರೆಯಲಾಗುವುದು ಎಂದು  ಜಿಲ್ಲಾ ಪಂಚಾಯತ್ ಸಿಇಒ ಹೇಳಿದ್ದಾರೆ. ಇದರ ಹೊರತಾಗಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ  ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 133 ಅನ್ವಯ ಸಾರ್ವಜನಿಕರಿಗೆ  ಅನಾನುಕೂಲ ಸೃಷ್ಟಿಸಿದ್ದಕ್ಕಾಗಿಯೂ ಪ್ರಕರಣ ದಾಖಲಿಸಲಾಗುವುದು.

ತಂಡ ಈಗಾಗಲೇ ಕಾರ್ಯನಿರತವಾಗಿದ್ದು ಮೂಡಬಿದಿರೆ ಹಾಗೂ ಕೋಣಾಜೆ ಪ್ರದೇಶಗಳಲ್ಲಿ ಮಂಗಳವಾರ ಹಾಗೂ ಬುಧವಾರ ಗಸ್ತು ನಡೆಸಿದೆ. ಪ್ರಮುಖ ಸ್ಥಳಗಳಲ್ಲಿ ಸೀಸಿಟಿವಿ ಕ್ಯಾಮರಾ ಅಳವಡಿಸುವಂತೆಯೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆಯೆಂದು ರವಿ ತಿಳಿಸಿದ್ದಾರೆ.