ಹಿಂದೂತ್ವದ ಕೊನೆದಿನದಲ್ಲಿ ದೇಶಪ್ರೇಮ ಬಂದಿದೆ

ದಿನೇಶ್ ಅಮೀನ್ ಮಟ್ಟು

ಮಂಗಳೂರು : “ಬಲಪಂಥೀಯ ರಾಜಕೀಯ ಓಲೈಕೆಯ ತಂತ್ರಗಾರಿಕೆಯಲ್ಲಿ ಹಿಂದೂತ್ವದ ಎಕ್ಸಫೈರಿ ಡೇಟ್ ಹತ್ತಿರವಾಗಿದ್ದು, ಅವರೀಗ ದೇಶಪ್ರೇಮದ ರಾಜಕೀಯ ನಡೆಸಲು ಮುಂದಾಗಿದ್ದು, ಬಹುಸಂಖ್ಯಾತ ಹಿಂದೂಗಳು ಎಚ್ಚರಿಕೆ ವಹಿಸಬೇಕಾಗಿದೆ” ಎಂದು ಜನನುಡಿ ಸಮಾರೋಪ ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

“ಭಾರತೀಯ ಜನತಾ ಪಾರ್ಟಿ ಸರಕಾರ ಎಂದಿಗೂ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಿಲ್ಲ, ಈ ಹಿಂದೆ ಘೋಷಣೆ ಮಾಡಿದಂತೆ ಸಮಾನ ನಾಗರಿಕ ಸಂಹಿತೆಯನ್ನೂ ತರುವುದಿಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಕೂಡ ಮಾಡುವುದಿಲ್ಲ. ಈಗ ಹಿಂದೂತ್ವವಾದ ಕೂಡ ಓಟು ತರುವುದಿಲ್ಲ ಎಂದು ಗೊತ್ತಾದ ಕಾರಣ ಭಾವನಾತ್ಮಕವಾಗಿ ದೇಶಪ್ರೇಮ, ರಾಷ್ಟ್ರಗೀತೆ ಹೆಸರಲ್ಲಿ ಅವರು ಸಾಂಸ್ಕೃತಿಕ ರಾಜಕಾರಣ ಮಾಡುತ್ತಿದ್ದಾರೆ” ಎಂದು ಮಟ್ಟು ಹೇಳಿದರು.

“ಬಲಪಂಥೀಯರು ದೇವರು, ಧರ್ಮ ಮತ್ತು ದೇಶವೆಂಬ ಮೂರು ಆಯುಧಗಳನ್ನಿಟ್ಟುಕೊಂಡು ಪರೋಕ್ಷ ಯುದ್ಧ ನಡೆಸುತ್ತಿದ್ದಾರೆ. ಇದರ ಬಗ್ಗೆ ದೇಶದ ಬಹುಸಂಖ್ಯಾತ ಜನರು ಎಚ್ಚರಿಕೆಯಿಂದ ಇರಬೇಕು. ನಾವು ಈ ಮೂರು ವಿಚಾರಗಳ ಬಗ್ಗೆ ಸ್ಪಷ್ಟತೆ ತಂದುಕೊಳ್ಳದೆ ಇದ್ದರೆ ಇವನ್ನು ಎದುರಿಸಲು ಸಾಧ್ಯವಿಲ್ಲ” ಎಂದು ಮಟ್ಟು ಎಚ್ಚರಿಕೆ ಮಾತುಗಳನ್ನು ಆಡಿದರು.

“ತಮ್ಮ ತಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಅದೇ ದೇಶಪ್ರೇಮ. ಅದಕ್ಕಾಗಿ ಬ್ರಿಗೇಡ್ ಕಟ್ಟುವ ಅಗತ್ಯವೂ ಇಲ್ಲ, ಅವುಗಳನ್ನು ಸ್ಪಷ್ಟಪಡಿಸುವ ಅಗತ್ಯವೂ ಇಲ್ಲ. ಮಾಡಬಾರದ ಅನಾಚಾರ ಮಾಡಿ, ಲಂಚ ಪಡೆದು, ದೇಶದ್ರೋಹದ ಕೆಲಸಗಳನ್ನು ಮಾಡಿ ದೇಶಪ್ರೇಮದ ವೇಷ ಹಾಕುವ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಸ್ಪಷ್ಟತೆ ಮತ್ತು ಅರಿವು ಪಡೆಯಲು ಅಂಬೇಡ್ಕರ್, ಗಾಂಧಿ, ಲೋಹಿಯಾ, ಮಾರ್ಕ್ಸ್ ಮೊದಲಾದವರನ್ನು ಓದಬೇಕು” ಎಂದು ಹೇಳಿದರು.

“ಕೇಂದ್ರದ ಆಡಳಿತರೂಢ ರಾಜಕೀಯ ಪಕ್ಷ ತಾವು ಒಂದು ಕಾಲದಲ್ಲಿ ವಿರೋಧಿಸಿದ ಬಸವಣ್ಣ, ಗಾಂಧಿ, ವಿವೇಕಾನಂದ, ನಾರಾಯಣ ಗುರು, ಭಗತ್ ಸಿಂಗ್ ಮೊದಲಾದವರನ್ನು ಆಪೆÇೀಶನ ತೆಗೆದುಕೊಳ್ಳಲು ಯತ್ನಿಸ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು” ಎಂದು ಅವರು ಹೇಳಿದರು.

“ಅಂಬೇಡ್ಕರರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರಕಾರ ಆಚರಣೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕಾರಣವೇ ಹೊರತು ಅಂಬೇಡ್ಕರರ ಮೇಲಿನ ಗೌರವವಲ್ಲ. ಹಾಗೆ ಅವರು ನಿಜಕ್ಕೂ ಅಂಬೇಡ್ಕರರ ಆಶಯಗಳಿಗೆ ಬೆಲೆ ಕೊಡುವುದೇ ಆದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಲಿ, ಸರಕಾರದ ದೇವಸ್ಥಾನಗಳಲ್ಲಿ ಇತರ ಜಾತಿಯವರಿಗೆ ಅರ್ಚಕರಾಗುವ ಅವಕಾಶ ನೀಡಲಿ” ಎಂದು ಸವಾಲೆಸೆದರು.

“ಕರ್ನಾಟಕ ಸರಕಾರ ಪರಿಶಿಷ್ಟರ ಅಭಿವೃದ್ಧಿಗೆ ಹೊಸ ಕಾಯಿದೆ ಮಾಡಿ ಒಟ್ಟು ಇಪ್ಪತ್ತು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದರೆ, ಇಡೀ ದೇಶಕ್ಕೆ ಮೋದಿ ಸರಕಾರ ನೀಡಿರುವುದು ಕೇವಲ 86 ಸಾವಿರ ಕೋಟಿ ಮಾತ್ರ. ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳ ಮೇಲೆ ಗೌರವ ಇಲ್ಲದ ವ್ಯಕ್ತಿ ಸರ್ವಾಧಿಕಾರಿ ಎನ್ನಿಸಿಕೊಳ್ಳುತ್ತಾನೆ. ಅರಸನ ಮೈಮೇಲಿನ ಬಟ್ಟೆ ಒಂದೊಂದಾಗೇ ಕಳಚಿ ಬೀಳ್ತಾ ಇದೆ. ಪ್ರಧಾನಿ ಸೂಟುಬೂಟು ತೊಟ್ಟು 56 ಇಂಚಿನ ಎದೆ ತೋರಿಸಿದರೂ ಅಂತರಂಗದ ಕುರೂಪ ಬಚ್ಚಿಡಲು ಸಾಧ್ಯವಿಲ್ಲ. ನಮಗೆ 56 ಬೇಕಾಗಿಲ್ಲ ಬಡವ ದಲಿತ ಶೋಷಿತ ರೈತ ಕಾರ್ಮಿಕರಿಗೆ ಮಿಡಿಯುವ ಹೃದಯ ಬೇಕಾಗಿದೆ” ಎಂದರು.

ಮಾತು ಮುಗಿಸುವ ಮುನ್ನ ದಿನೇಶ್ ಅಮೀನ್ ಮಟ್ಟು ಅಂತರ್ಜಾತೀಯ ವಿವಾಹಗಳು ಜಾತಿವಿನಾಶಕ್ಕೆ ಸಹಾಯಕ. ಅದಕ್ಕೆ ಹೆಚ್ಚು ಪೆÇ್ರೀತ್ಸಾಹ ಕೊಡಿ ಎಂದು ಪೆÇೀಷಕರಿಗೆ ಕಿವಿಮಾತು ಹೇಳಿದರು.


ಬರಗೂರು ಸರ್ಜಿಕಲ್ ಹೋಲಿಕೆ

“ಸಾಹಿತಿ ಬರಗೂರು ರಾಮಚಂದ್ರ ಅವರು ಅನ್ನಭಾಗ್ಯ ಯೋಜನೆಯನ್ನು ಮಿಲಿಟರಿ ಸರ್ಜಿಕಲ್ ಸ್ಟ್ರೈಕ್ ನೊಂದಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ. ಇದು ದೇಶದ ಜನರಲ್ಲಿ ಭೀತಿ ಇರುವುದನ್ನು ತೋರಿಸುತ್ತದೆ” ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

“ಅನ್ನಭಾಗ್ಯ ಬಡವರ ಜೀವ ರಕ್ಷಿಸಲು ಇರುವುದು. ಸರ್ಜಿಕಲ್ ಸ್ಟ್ರೈಕ್ ಪ್ರಾಣ ತೆಗೆಯುವ ಕೆಲಸ. ಇವೆರಡು ಉದಾಹರಣೆ ಇರಿಸಿಕೊಂಡು ಬರಗೂರು ಅವರು ಇತ್ತೀಚೆಗೆ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದು, ಈ ಬಗ್ಗೆ ಯಾರೂ ಕೂಡ ಆಕ್ಷೇಪ ಎತ್ತದಿರುವುದು ಆತಂಕ ಮೂಡಿಸಿದೆ” ಎಂದು ಮಟ್ಟು ಹೇಳಿದರು.