ದ ಕ, ಉಡುಪಿ, ಉ ಕ ಇ-ಸ್ವತ್ತು ಸಮಸ್ಯೆ ಪರಿಹಾರ ಯತ್ನ : ಎಚ್ಕೆ

ಕಾರವಾರ : “ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿನ ಇ-ಸ್ವತ್ತು ಸಮಸ್ಯೆ ಬಗೆಹರಿಸಲು ಕ್ಯಾಬಿನೆಟ್ ಉಪಸಮಿತಿ ಸಭೆ ನಡೆದಿದ್ದು, ಬಗೆಹರಿಸಲು ಪ್ರಯತ್ನ ನಡೆದಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಖಾಸಗಿ ಕಾರ್ಯದ ನಿಮಿತ್ತ ನಗರಕ್ಕೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, “ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಹೆಚ್ಚಿರುವುದರಿಂದ ಖಾತಾ ಹಂಚಿಕೆಗೆ ಸಮಸ್ಯೆ ಉಂಟಾಗಿದೆ. ಇ-ಸ್ವತ್ತು ಖಾತಾ ಹಂಚಿಕೆಯಲ್ಲಿ ಹಲವು ಕಡೆ ಪಿಡಿಓಗಳು ಜನರನ್ನು ಶೋಷಣೆ ಮಾಡುತ್ತಾರೆ. ಅದನ್ನು ತಡೆಯಲೆಂದು ಇ-ಸ್ವತ್ತನ್ನು ಸಕಾಲ ಯೋಜನೆಯಡಿ ತರಲಾಗುವುದು. ಈ ಬಗ್ಗೆ ಕ್ಯಾಬಿನೆಟ್ ಉಪಸಮಿತಿಯಲ್ಲಿ ಕೆಲವು ದಿನಗಳ ಹಿಂದೆ ಚರ್ಚೆ ನಡೆಸಲಾಗಿದ್ದು, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಅಲ್ಲದೇ ಅದನ್ನು ಸಕಾಲದಲ್ಲಿ ತರುವುದರಿಂದ ನಿಗದಿತ ಸಮಯದಲ್ಲಿ ಅದನ್ನು ಹಂಚಿಕೆ ಮಾಡಲಾಗುತ್ತದೆ” ಎಂದರು.